
ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಸನ್ನಿಹಿತ
ಕುಂದಾಪುರ: ಉಡುಪಿ ಜಿಲ್ಲೆಯು ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಮರವಂತೆಯಲ್ಲಿ ಒಂದೆಡೆ ಸಮುದ್ರ ಮತ್ತೊಂದೆಡೆ ನದಿ ಹಾಗೂ ಮಧ್ಯೆ ರಸ್ತೆಯಿದ್ದು ಇದೊಂದು ಅದ್ಭುತ ಪ್ರದೇಶ. ಇಲ್ಲಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಯೋಜನೆ ಸಿದ್ಧಪಡಿಸಿ ನೀಡಿದಲ್ಲಿ ಅಗತ್ಯಕ್ರಮ ವಹಿಸಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.
ಗುರುವಾರ ಸಂಜೆ ತ್ರಾಸಿ-ಮರವಂತೆ ಸಮುದ್ರ ತೀರ ವೀಕ್ಷಣೆ ಬಳಿಕ ಅವರು ಇಲ್ಲಿನ ಅಭಿವೃದ್ಧಿ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಬೈಂದೂರು ಕ್ಷೇತ್ರದ ಕೊಲ್ಲೂರು ಸಹಿತ ಮರವಂತೆ, ಸೋಮೇಶ್ವರ ಬೀಚ್ ಅಭಿವೃದ್ಧಿಯ ಕುರಿತು ತಿಂಗಳಿನ ಹಿಂದೆ ಸ್ಥಳೀಯ ಶಾಸಕರು ಹಾಗೂ ಮುಖಂಡರ ಜೊತೆಗೆ ಕೇಂದ್ರ ಪ್ರವಾಸೋಧ್ಯಮ ಸಚಿವರನ್ನು ಭೇಟಿ ಮಾಡಲಾಗಿತ್ತು. ‘ಸಾಸಿ’ ಎನ್ನುವ ಯೋಜನೆಯಡಿ ಪಡುವರಿ-ಸೋಮೇಶ್ವರ, ಮರವಂತೆ ಹಾಗೂ ಕೊಲ್ಲೂರು ದೇವಸ್ಥಾನ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬೇಡಿಕೆಯಿಟ್ಟು ಪ್ರಸ್ತಾವನೆ ಕಳಿಸಲಾಗಿತ್ತು. ಗುರುವಾರ ಕೇಂದ್ರ ಮಂತ್ರಿಗಳು ಈ ಮೂರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಸಕಾರಾತ್ಮಕ ಸ್ಪಂದನೆ ನಿರೀಕ್ಷೆಯಿದೆ ಎಂದರು.
ಇದಕ್ಕೂ ಮೊದಲು ಕೇಂದ್ರ ಸಚಿವರು ಮರವಂತೆಯಲ್ಲಿ ಕೆಲ ತಿಂಗಳ ಹಿಂದೆ ಆರಂಭಗೊಂಡ ಸ್ಕೈ ಡೈನಿಂಗ್ ಏರಿದರು.
ಈ ಸಂದರ್ಭ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್., ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಸ್ಥಳೀಯಾಡಳಿತ ಪ್ರತಿನಿಧಿಗಳು, ವಿವಿಧ ಇಲಾಖಾಧಿಕಾರಿಗಳು ಇದ್ದರು.