
ಹರ್ಬಲ್ ಪ್ರೊಡಕ್ಟ್ ಹುಡುಕಿದಾಗ ಟ್ರೇಡಿಂಗ್ ಕನೆಕ್ಟ್: 13.57 ಲಕ್ಷ ವಂಚನೆ
ಮಂಗಳೂರು: ಗೂಗಲ್‌ನಲ್ಲಿ ಹರ್ಬಲ್ ಪ್ರೊಡಕ್ಟ್ ಬಗ್ಗೆ ಹುಡುಕಾಡಿದ ವ್ಯಕ್ತಿಗೆ ಕರೆನ್ಸಿ ಟ್ರೇಡಿಂಗ್ ಕನೆಕ್ಟ್ ಆಗಿ 13.57 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ನಡೆದಿದೆ. ಈ ಬಗ್ಗೆ ಸೆನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ: ಮಾರ್ಚ್ ತಿಂಗಳಿನಲ್ಲಿ ಹರ್ಬಲ್ ಪ್ರೊಡೆಕ್ಟ್ ಬಗ್ಗೆ ಗೂಗಲ್ ನಲ್ಲಿ ಹುಡುಕುತ್ತಿದ್ದ ವೇಳೆ ಟೆಲಿಗ್ರಾಮ್ ಖಾತೆ @Saanvi070 ಸಿಕ್ಕಿದ್ದು, ಈ ಟೆಲಿಗ್ರಾಮ್ ಗೆ ಖಾತೆಗೆ ಚಾಟ್ ಮಾಡಿದಾಗ ಸಂದೇಶ ಸ್ವೀಕರಿಸಿದ ವ್ಯಕ್ತಿಯು ತಾನು ಸಾನ್ವಿ ಶೆಟ್ಟಿ ತಾನು ದುಬೈನಲ್ಲಿರುವುದಾಗಿ ತಿಳಿಸಿದ್ದಾನೆ. ಈ ವ್ಯಕ್ತಿ ಅವರನ್ನು ಹರ್ಬಲ್ ಪ್ರೊಡಕ್ಟ್ ಬಗ್ಗೆ ವಿಚಾರಿಸಿದಾಗ ತಾನು ಬೆಂಗಳೂರಿಗೆ ಬಂದಾಗ ಈ ಬಗ್ಗೆ ಮಾತನಾಡುವುದಾಗಿ ತಿಳಿಸಿದ್ದರು ಎಂದು ಮೋಸಹೋದ ವ್ಯಕ್ತಿ ಹೇಳಿದ್ದರು.
ನಂತರ ಈ ವ್ಯಕ್ತಿಗೆ ಕರೆನ್ಸಿ ಟ್ರೆಡಿಂಗ್ ಬಗ್ಗೆ ತಿಳಿಸಿ ಅದರಲ್ಲಿ ಹೂಡಿಕೆ ಮಾಡಿದರೆ ಲಾಭಾಂಶ ದೊರೆಯುವುದಾಗಿ ತಿಳಿಸಿದ್ದಾರೆ. ಅದರಂತೆ ಟೆಲಿಗ್ರಾಮ್ ಮುಖೇನ ಲಿಂಕ್ ಕಳುಹಿಸಿ ಅದರಲ್ಲಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಈ ಲಿಂಕ್‌ನ್ನು ತೆರೆದು ಇಮೇಲ್ ಐಡಿ ಹಾಕಿ ನೋಂದಣಿಯಾಗಿ ಮೊದಲಿಗೆ ಅವರು ಹೇಳಿದಂತೆಯೇ ಟೆಲಿಗ್ರಾಮ್ ನಲ್ಲಿ ನೀಡಿದ ಬ್ಯಾಂಕ್ ಖಾತೆಗೆ ರೂ.21,250 ಹಣವನ್ನು ಹೂಡಿಕೆ ಮಾಡಿದ್ದರು. ನಂತರ ಈ ವ್ಯಕ್ತಿ ಮೊದಲಿಗೆ ಹೂಡಿಕೆ ಮಾಡಿದ ಹಣಕ್ಕೆ ರೂ.2550 ಹಣ ಲಾಭಾಂಶವನ್ನು ವಿತ್ ಡ್ರಾ ಮಾಡಿರುತ್ತಾರೆ. ಇದಾದ ಮೇಲೆ ಅವರು ವೆಬ್ ಸೈಟ್ ನಲ್ಲಿಯೇ ಕಸ್ಟಮರ್ ಸರ್ವೀಸ್ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗುವಂತೆ ತಿಳಿಸಿದ್ದು, ಅದರಂತೆ ಈವ್ಯಕ್ತಿ ಟೆಲಿಗ್ರಾಮ್ ಚಾನೆಲ್ @Plus500Global_CS ನೇದ್ದಕ್ಕೆ ಜಾಯಿನ್ ಆಗಿರುತ್ತಾರೆ. ನಂತರ ಈ ಟೆಲಿಗ್ರಾಮ್ ಗ್ರೂಪ್ ನಲ್ಲಿ ಹೇಳಿದಂತೆ ದಿನಾಂಕ 26-03-2025 ರಿಂದ 28-04-2025 ರವರೆಗೆ ಅಪರಿಚಿತ ವ್ಯಕ್ತಿಯು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ NEFT ಮತ್ತು RTGS ಮೂಲಕ ಹಂತ ಹಂತವಾಗಿ ಒಟ್ಟು 13,57,973 ಹಣ ಹೂಡಿಕೆ ಮಾಡಿದ್ದಾರೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಕರೆನ್ಸಿ ಟ್ರೇಡಿಂಗ್ ಹೆಸರಿನಲ್ಲಿ ಆನ್ ಲೈನ್ ಮುಖಾಂತರ ಒಟ್ಟು ರೂ. 13,57,973 ಹಣವನ್ನು ಮೋಸದಿಂದ ಪಾವತಿಸಿಕೊಂಡು ಆನ್ ಲೈನ್ ವಂಚನೆ ಮಾಡಿದ್ದಾರೆ. ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದಾರೆ.