ವೆನ್ಲಾಕ್‌ಗೆ 70 ಕೋಟಿಯಲ್ಲಿ ಒಪಿಡಿ ಬ್ಲಾಕ್

ವೆನ್ಲಾಕ್‌ಗೆ 70 ಕೋಟಿಯಲ್ಲಿ ಒಪಿಡಿ ಬ್ಲಾಕ್


ಮಂಗಳೂರು: ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ 70 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಹೊರ ರೋಗಿ ವಿಭಾಗ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. 5.5 ಕೋಟಿ ರೂ. ಮೊತ್ತದಲ್ಲಿ ಹಳೆ ಕಟ್ಟಡ ನಿರ್ವಹಣೆ ಮಾಡಲಾಗುತ್ತಿದೆ ಎಂದು ಸರಕಾರಿ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಪ್ರಕಾಶ್ ಡಿ.ಎಸ್. ಹೇಳಿದರು.

ನಗರದ ಜೆಪ್ಪು ಎಂ.ಆರ್.ಭಟ್ ಲೇನ್‌ನಲ್ಲಿ ಗುರುವಾರ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನಿಂದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜತೆಗಾರರಿಗೆ ನಿರಂತರ ಎಂಟು ವರ್ಷಗಳಿಂದ ರಾತ್ರಿ ಊಟ ನೀಡುತ್ತಿರುವ ‘ಕಾರುಣ್ಯ ಯೋಜನೆ’ಯ ಪಾಕಶಾಲೆ ಮತ್ತು ಎಂಫೆಂಡ್ಸ್ ಕಾರ್ಯಾಲಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಹುತೇಕ ಹೊರಜಿಲ್ಲೆಯ ರೋಗಿಗಳೇ ವೆನ್ಲಾಕ್‌ನ ಪ್ರಯೋಜನ ಪಡೆಯುತ್ತಿದ್ದು, ದಕ ಜಿಲ್ಲೆಯ ಜನರು ಚಿಕಿತ್ಸೆಗೆ ಬರಬೇಕಾದರೆ ಸ್ವಚ್ಛತೆ, ಆಕರ್ಷಣೆ ಇರಬೇಕು. ಈ ನಿಟ್ಟಿನಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ಹೊಸ ಬ್ಲಾಕ್, ಕಟ್ಟಡದ ವಿವಿಧ ವಿಭಾಗಗಳ ಅಂತರ್ ಸಂಪರ್ಕ, ಎಲೆಕ್ಟ್ರಿಕ್ ಬಗ್ಗೀಸ್ ಇತ್ಯಾದಿ ಹೊಸ ಸೌಲಭ್ಯ ನಿರ್ಮಾಣವಾಗಲಿದೆ ಎಂದರು.

ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ವಸಂತ ಕುಮಾರ್ ಶೆಟ್ಟಿ ಮಾತನಾಡಿ, ಹಸಿದವರಿಗೆ ಊಟ ಬಡಿಸುವುದು ಬಹುದೊಡ್ಡ ಸೇವೆ. ದಾನಿಗಳನ್ನು ಹುಡುಕಿ ನಿರಂತರ ಎಂಟು ವರ್ಷಗಳಿಂದ ಆಹಾರ ನೀಡುತ್ತಿರುವುದು ಎಂಫ್ರೆಂಡ್ಸ್‌ನ ಬದ್ಧತೆಯ ಸೇವೆಗೆ ಸಾಕ್ಷಿ. ಇದಕ್ಕೆ ದೊಡ್ಡ ಮನಸ್ಸು ಬೇಕು ಎಂದರು.

ವೈಟ್‌ಸ್ಟೋನ್ ಉದ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಶರೀಫ್ ಬೋಳಾರ್ ಉದ್ಘಾಟನೆ ನೆರವೇರಿಸಿದರು. ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುಜಾಹ್ ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಕಾರಿ ಝುಬೈರ್ ಬುಳೇರಿಕಟ್ಟೆ ಉಪಸ್ಥಿತರಿದ್ದರು.

ಎಂಫ್ರೆಂಡ್ಸ್ ಕಾರುಣ್ಯ ಯೋಜನೆ ಮುಖ್ಯಸ್ಥ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಂಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article