
ಅಬ್ದುಲ್ ರಹ್ಮಾನ್ ಕೊಲೆ-ಪೂರ್ವ ದ್ವೇಷ ಕಾರಣ..?: ಸಚಿವರುಗಳ ಬದಲಾವಣೆಗೆ ಒತ್ತಡ
ಮಂಗಳೂರು: ಬಂಟ್ವಾಳ ಇರಾಕೋಡಿಯ ಅಬ್ದುಲ್ ರಹ್ಮಾನ್ (34) ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇದು ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ನಡೆದ ಕೆಲ ದಿನಗಳಲ್ಲೇ ಈ ಕೊಲೆ ನಡೆದಿರುವುದರಿಂದ ಇದೊಂದು ಪ್ರತೀಕಾರದ ಕೊಲೆಯಾಗಿರಬಹುದು ಎಂಬ ಅನುಮಾನ ಮೂಡಿತ್ತು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಇದೊಂದು ಪೂರ್ವ ದ್ವೇಷದ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
ಮದ್ಯ ಸೇವಿಸಿದ್ದರು...:
ಗಾಯಗೊಂಡಿರುವ ಕಲಂದರ್ ಶಾಫಿ ನೀಡಿದ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಆರು ಜನರ ತಂಡ ಅಬ್ದುಲ್ ರಹ್ಮಾನ್ ಮೇಲೆ ದಾಳಿ ನಡೆಸಿದ್ದರು. ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದ ತಂಡವು ಅದಕ್ಕೂ ಮೊದಲು ಬಾರೊಂದರಲ್ಲಿ ಮದ್ಯ ಸೇವಿಸಿ ಬಂದಿದ್ದರು ಎನ್ನಲಾಗಿದೆ. ಎರಡು ಡಿಯೋ ದ್ವಿಚಕ್ರ ವಾಹನದಲ್ಲಿ ಮಾರಕಾಸ್ತ್ರಗಳೊಂದಿದ್ದ ಬಂದಿದ್ದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಮೂವರು ಪ್ರಮುಖ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ಸಚಿವರ ಬದಲಾವಣೆಗೆ ಆಗ್ರಹ..
ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಮುಸ್ಲಿಂ ಮುಖಂಡರು ಗೃಹ ಸಚಿವ ಡಾ, ಜಿ. ಪರಮೇಶ್ವರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬದಲಾಯಿಸಲು ಜಿಲ್ಲೆಯ ಮುಸ್ಲಿಂ ಮುಖಂಡರು ಆಗ್ರಹಿಸುತ್ತಿದ್ದಾರೆ, ಈ ಕುರಿತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಚಿವರುಗಳು ಮುಸ್ಲಿಂ ಸಮುದಾಯದ ನೋವು ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕರುಗಳು ಅಬ್ದುಲ್ ರಹ್ಮಾನ್ ಮನೆಗೆ ಭೇಟಿ ನೀಡಿ ಮನೆ ಮಂದಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸದ್ಯ ಪರಿಸ್ಥಿತಿ ಆತಂಕದಲ್ಲಿದೆ. ಜಿಲ್ಲೆಯಲ್ಲಿ ನಾಳೆ ಸಂಜೆ 6 ಗಂಟೆವರೆಗೂ ನಿಷೇಧಾಜ್ಞೆ ಜಾರಿಯಲ್ಲಿದೆ. ಮಂಗಳೂರು ಕಮಿನರೇಟ್ ಮತ್ತು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲೂ ನಿಷೇಧಾಜ್ಞೆ ಇದೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.