
ಕೊಲೆ ಯತ್ನ ಆರೋಪಿಗಳು ನ್ಯಾಯಾಲಯಕ್ಕೆ
ಬಂಟ್ವಾಳ: ಬಸ್ ನಿಲ್ದಾಣದ ಬಳಿ ನಿಂತಿದ್ದ ವೇಳೆ ವ್ಯಕ್ತಿಯೊಬ್ಬನ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಘಟನೆಯು ಮೇ 16 ರ ಶುಕ್ರವಾರ ರಾತ್ರಿ ಸುಮಾರು 7.45 ಗಂಟೆಗೆ ನಡೆದಿದ್ದು, ಅಕ್ಕರಂಗಡಿ ನಿವಾಸಿ ಅಮ್ಮಿ ಯಾನೆ ಹಮೀದ್ ಎಂಬಾತನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿ ಬಳಿಕ ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ ಅವರ ನೇತೃತ್ವದಲ್ಲಿ ಎಸ್.ಐ. ನಂದಕುಮಾರ್, ರಾಮಕೃಷ್ಣ, ಮಂಜುನಾಥ್ ಅವರ ತಂಡವನ್ನು ರಚಿಸಿ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಆರೋಪಿಗಳಾದ ಉಳ್ಳಂಜೆ ನೌಷದ್, ಕೈಕಂಬ ನಿವಾಸಿ ನವಾಜ್ ಯಾನೆ ಬೀಡಿ ನವಾಜ್, ನೆಹರುನಗರ ನಿವಾಸಿ ಮೇಹರೂಪ್ ಮತ್ತು ನೆಹರು ನಗರ ನಿವಾಸಿ ರಿಝ್ವಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹಿನ್ನೆಲೆ:
ಹಮೀದ್, ತಸ್ಲೀಮ್ ಎಂಬಾತನ ಸ್ನೇಹಿತನಾಗಿದ್ದು ತಸ್ಲೀಮ್ ಹಾಗೂ ಹ್ಯಾರೀಶ್ ನಡುವೆ ವೈಯಕ್ತಿಕ ವಿಚಾರದಲ್ಲಿ ಗಲಾಟೆ ನಡೆದು ಬಳಿಕ ಹ್ಯಾರೀಶ್ ತಸ್ಲೀಮ್ ಎಂಬಾತನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿ ಬಳಿಕ ಪರಾರಿಯಾಗಿದ್ದ.
ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಆದರೆ ಈವರೆಗೆ ಹ್ಯಾರೀಶ್ ಬಂಧನವಾಗಿಲ್ಲ. ಬಳಿಕ ತಸ್ಲೀಮ್ ನ ಸ್ನೇಹಿತ ಹಮೀದ್, ಆರೋಪಿ ಹ್ಯಾರೀಶ್ ಪತ್ತೆ ಮಾಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿ ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ. ಇದರ ಬಗ್ಗೆ ಕೋಪಗೊಂಡ ಹ್ಯಾರೀಶ್, ನೌಷದ್ ಬಳಸಿಕೊಂಡು ಹಮೀದ್ ಕೊಲೆಗೆ ಸಂಚು ರೂಪಿಸಿ ಅವರನ್ನು ಸುಫಾರಿ ನೀಡಿದ್ದಾನೆ ಎಂದು ಹೇಳಲಾಗಿದೆ.
ಇದೀಗ ಕೊಲೆಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಸೂತ್ರದಾರಿ ಪೊಲೀಸರಿಗೆ ವಾಂಟೆಡ್ ಆಗಿರುವ ಹ್ಯಾರೀಶ್ ಪತ್ತೆಯಾಗಿಲ್ಲ.