
ಮೇ 30ರಿಂದ ರಾಜ್ಯ ಪವರ್ ಲಿಫ್ಟಿಂಗ್ ಸ್ಪರ್ಧೆ
ಮಂಗಳೂರು: ನಗರದ ಬಾಲಾಂಜನೇಯ ಜಿಮ್ನಾಶಿಯಂ ಅಂಗಸಂಸ್ಥೆಯಾದ ಐರನ್ ಗೇಮ್ಸ್ ಪ್ರಮೋಟರ್ಸ್ ಮಂಗಳೂರು ವತಿಯಿಂದ ಮೇ 30ರಿಂದ ಜೂನ್ 1ರವರೆಗೆ ನಗರದ ಬೋಂದೆಲ್‌ನ ಕೆ.ಪಿ.ಟಿ.ಸಿ. ನೌಕರರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಬ್ ಜೂನಿಯರ್, ಜೂನಿಯರ್ ಹಾಗೂ 50ನೇ ಸೀನಿಯರ್ ಪುರುಷರ ಮತ್ತು 43ನೇ ಮಹಿಳೆಯರ ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ.
ರಾಜ್ಯಾದ್ಯಂತದಿಂದ ಸುಮಾರು 300ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ಪ್ರಬಲ ತಂಡಗಳಾದ ಮಂಗಳೂರಿನ ಬಾಲಾಂಜನೇಯ ಜಿಮ್ನಾಶಿಯಂ, ದಾವಣಗೆರೆಯ ಬೀರೇಶ್ವರ ವ್ಯಾಯಾಮ ಶಾಲೆ ಮತ್ತು ಮುನ್ಸಿಪಲ್ ಸ್ಪೋರ್ಟ್ಸ್ ಕ್ಲಬ್, ಬೆಂಗಳೂರಿನ ಸೂಪರ್ ಬಾಡೀಸ್ ಫಿಟ್ನೆಸ್ ಸೆಂಟರ್ ತಂಡಗಳ ಮಧ್ಯೆ ತಂಡ ಪ್ರಶಸ್ತಿಗಾಗಿ ತೀವ್ರವಾದ ಪೈಪೋಟಿ ನಡೆಯುವ ನಿರೀಕ್ಷೆಯಿದೆ. ಈ ಸ್ಪರ್ಧೆಗಳನ್ನು ಬಾಲಾಂಜನೇಯ ಜಿಮ್ನಾಶಿಯಂನ ಖಜಾಂಚಿಯಾಗಿ ಸೇವೆ ಸಲ್ಲಿಸಿದ ದಿ. ಎಸ್ ಸುರೇಂದ್ರ ಶೆಣೈ ಅವರ ಸ್ಮರಣಾರ್ಥ ನಡೆಸಲಾಗುತ್ತಿದೆ ಎಂದು ಪವರ್ಲಿಪ್ಟಿಂಗ್ ಇಂಡಿಯಾ ಅಧ್ಯಕ್ಷ, ಕರ್ನಾಟಕ ಪವರ್ಲಿಫ್ಟಿಂಗ್ ಅಸೋಸಿಯೇಶನ್ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಶ್ರೇಷ್ಠ ಮಟ್ಟದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪದಕ ವಿಜೇತರು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಜೂನ್ 22 ರಿಂದ 30ರವರೆಗೆ ದಾವಣಗೆರೆಯಲ್ಲಿ ಜರಗಲಿರುವ ರಾಷ್ಟ್ರೀಯ ಸ್ಪರ್ಧೆಗೆ ಕರ್ನಾಟಕ ತಂಡವನ್ನು ಈ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗುವುದು ಎಂದರು.
ಐರನ್ ಗೇಮ್ಸ್ ಪ್ರೊಮೋಟರ್ಸ್ ಅಧ್ಯಕ್ಷ ಕೋಲಿನ್ ರೋಡ್ರಿಗಸ್, ದ.ಕ. ಜಿಲ್ಲಾ ಪವರ್ ಲಿಪ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಗಟ್ಟಿ, ಕಾರ್ಯದರ್ಶಿ ಮಧುಚಂದ್ರ, ಖಜಾಂಜಿ ಕೆ.ಎಂ. ಜಯರಾಮ್ ಉಪಸ್ಥಿತರಿದ್ದರು.