ಮಂಗಳೂರು ವಿ.ವಿ.: ಜೂ.9ರಿಂದ ಸೆಮಿಸ್ಟರ್ ಪರೀಕ್ಷೆ, ಜು. 28ರಿಂದ ಪದವಿ ತರಗತಿ ಆರಂಭ

ಮಂಗಳೂರು ವಿ.ವಿ.: ಜೂ.9ರಿಂದ ಸೆಮಿಸ್ಟರ್ ಪರೀಕ್ಷೆ, ಜು. 28ರಿಂದ ಪದವಿ ತರಗತಿ ಆರಂಭ


ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಆರನೇ ಸೆಮಿಸ್ಟರ್ ವಾರ್ಷಿಕ ಪರೀಕ್ಷೆಗಳು ಜೂನ್ 9 ರಿಂದ ಆರಂಭವಾಗಿ ಜುಲೈ 15 ರಂದು ಮುಕ್ತಾಯವಾಗಲಿದೆ. ಜುಲೈ 28 ರಿಂದ ಪದವಿ ತರಗತಿ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಕುಲಪತಿ ಪ್ರೊ..ಪಿ.ಎಲ್.ಧರ್ಮ ಹೇಳಿದ್ದಾರೆ.

ಮಂಗಳೂರು ವಿವಿ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಗುರುವಾರ ನಡೆದ ಈ ಸಾಲಿನ ಶೈಕ್ಷಣಿಕ ಮಂಡಳಿಯ ಪ್ರಥಮ ವಿಶೇಷ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ನಾತಕ ಪದವಿ ಪರೀಕ್ಷೆ ಬಳಿಕ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ 35 ದಿನಗಳು ಬೇಕು. ಹಾಗಾಗಿ ಜು. 28 ರಂದು ಪದವಿ ತರಗತಿ ಆರಂಭಿಸಲು ಚಿಂತಿಸಲಾಗಿದೆ. ರಾಜ್ಯಾದ್ಯಂತ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ವೇಳಾಪಟ್ಟಿ ಪ್ರಕಟಿಸಲು ಸರ್ಕಾರ ಸೂಚನೆ ನೀಡಿದೆ. ಆದರೆ ಮಂಗಳೂರು ವಿವಿ ಹೊರತುಪಡಿಸಿ ಬೇರೆ ವಿವಿಗಳಲ್ಲಿ ಅಂತಿಮ ಸೆಮಿಸ್ಟರ್ ತರಗತಿಗಳು ಇನ್ನೂ ಮುಗಿದಿಲ್ಲ. ಈ ವಿಚಾರದಲ್ಲಿ ಮಂಗಳೂರು ವಿವಿ ಪರೀಕ್ಷೆ ನಡೆಸುವ ಹಂತಕ್ಕೆ ತಲುಪಿದೆ. ಆದರೆ ಏಕರೂಪದ ವೇಳಾಪಟ್ಟಿ ನಿಯಮದ ಬಗ್ಗೆ ಅಧಿಕೃತ ಮಾಹಿತಿ ವಿವಿಗೆ ಬಂದಿಲ್ಲ. ಅದನ್ನು ಯಾವ ರೀತಿ ಕಾರ್ಯರೂಪಕ್ಕೆ ತರುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಎಸ್‌ಇಪಿ ಪ್ರಸ್ತಾವನೆ ಬಂದಜರೆ ಸರ್ಕಾರದ ಒಪ್ಪಿಗೆ ಪಡೆದು ಏಕರೂಪದ ವೇಳಾಪಟ್ಟಿ ಅಳವಡಿಸಬೇಕಾಗುತ್ತದೆ ಎಂದರು.

ಮಂಗಳೂರು ವಿವಿಯ ಬನ್ನಡ್ಕ, ನೆಲ್ಯಾಡಿ, ಕೊಣಾಜೆ ಹಾಗೂ ವಿವಿ ಸಂಜೆ ಘಟಕ ಕಾಲೇಜುಗಳನ್ನು ಈ ಶೈಕ್ಷಣಿಕ ವರ್ಷದಿಂದ ನೇರವಾಗಿ ಸರ್ಕಾರವೇ ನಡೆಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರದ ಅಭಿಪ್ರಾಯಕ್ಕೆ ಕಾಯಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ 30ಕ್ಕಿಂತ ಕಡಿಮೆ ಇದ್ದರೆ ಕಾಲೇಜು ನಡೆಸಲು ಸಾಧ್ಯವಾಗದು. ಹೀಗಾಗಿ ಅಂತಹ ಕಾಲೇಜುಗಳನ್ನು, ಅಲ್ಲಿರುವ ಕೋರ್ಸ್‌ಗಳನ್ನು ಮುಚ್ಚುವ ಬಗ್ಗೆ ವಿವಿ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದರು.

ಮಂಗಳೂರು ವಿವಿಯನ್ನು ಆರ್ಥಿಕವಾಗಿ ಸದೃಢಗೊಳಿಸುವ ದೃಷ್ಟಿಯಿಂದ ಎಲ್ಲ 18 ವಿಭಾಗಗಳಲ್ಲಿ 42 ಬಗೆಯ ಕಾರ್ಯಕ್ರಮಗಳನ್ನು ಸಕ್ರಿಯಗೊಳಿಸಲಾಗುತ್ತಿದೆ. ಕಾಯಂ ಪ್ರಾಧ್ಯಾಪಕರ ಕೊರತೆ, ನ್ಯಾಕ್ನ ಬಿ ಗ್ರೇಡ್ ಹೊರತಾಗಿಯೂ ದೊಡ್ಡ ಯೋಜನೆಗಳನ್ನು ಕಾರ್ಯಗತಗೊಳಿಸಿ ಹಣಕಾಸು ಹರಿವಿಗೆ ಪ್ರಯತ್ನಿಸಲಾಗುತ್ತಿದೆ. ಯುವ ಸಂಶೋಧಕರಿಗೆ ಒತ್ತು ನೀಡಲಾಗುತ್ತಿದ್ದು, ಅಂತಹವರಿಗೆ ತಲಾ 1 ಲಕ್ಷ ರೂ.ನಂತೆ 5 ಲಕ್ಷ ರೂ. ಮೂಲ ಧನವಾಗಿ ನೀಡಲು ಉದ್ದೇಶಿಸಲಾಗಿದೆ. ಕರಾವಳಿಗೆ ಪೂರಕವಾದ ಅಥವಾ ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ, ಶಕ್ತಿ ಮುಂತಾದ ಯೋಜನೆಗಳ ಸಾಧಕಗಳ ಬಗ್ಗೆ ಅಧ್ಯಯನ ನಡೆಸಿದರೆ, ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸುವ ಮೂಲಕ ಆಡಳಿತಕ್ಕೂ ನೆರವಾಗುವ ಉದ್ದೇಶವನ್ನು ಹೊಂದಲಾಗಿದೆ ಎಂದರು.

ಕಳೆದ 15 ವರ್ಷಗಳಿಂದ ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯರನ್ನು ವಿವಿಯ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು. ವಿವಿಯ ಸದ್ಯದ ಪರಿಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕ ಹೊರತುಪಡಿಸಿ ಬೇರೆ ಯಾವುದೇ ನೇಮಕಾತಿ ನಡೆಸುತ್ತಿಲ್ಲ. ಈಗಾಗಲೇ ಹೊರಗುತ್ತಿಗೆಯಲ್ಲಿರುವ 140 ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಉಳಿದ 60 ಮಂದಿಯನ್ನು ಇನ್ನೂ ತಗೆಯಬೇಕು ಎಂದರು.

ವಿಧಾನ ಪರಿಷತ್ ಸದಸ್ಯ, ಮಂಡ್ಯದ ಮಧು ಮಾದೇ ಗೌಡರು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಕೈಗೊಂಡ ಕ್ರಮದ ಕುರತ ಪ್ರಶ್ನೆಗೆ ಉತ್ತರಿಸಿದ ಪ್ರೊ.ಪಿ.ಎಲ್.ಧರ್ಮ, ವಿವಿಯಲ್ಲಿ ಉದ್ಯೋಗ ಸೃಜಿಸುವ ಹೊಸ ಕೋರ್ಸ್ಗಳನ್ನು ಆರಂಭಿಸುವ ಬಗ್ಗೆ ಚರ್ಚಿಸಲಾಗಿದೆ. ಪಿಯುಸಿ ಬಳಿಕ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೇರೆ ಕಡೆ ವಿದ್ಯಾರ್ಜನೆ ನಡೆಸುತ್ತಿದ್ದಾರೆ. ಡೀಮ್ಡ್ ವಿವಿಗಳಲ್ಲಿ 500-600 ಮಕ್ಕಳಿದ್ದರೆ,

ಮಂಗಳೂರು ವಿವಿ ವ್ಯಾಪ್ತಿಯ ಕೊಡಗು, ದ.ಕ. ಮತ್ತು ಉಡುಪಿಗಳಲ್ಲಿ 1.60 ಲಕ್ಷದಷ್ಟು ವಿದ್ಯಾರ್ಥಿಗಳಿದ್ದಾರೆ. ಖಾಸಗಿ ವಿವಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಬೇಗನೆ ಪಾಠ, ಪರೀಕ್ಷೆ, ಮೌಲ್ಯಮಾಪನ ಮುಗಿಸಿ ಫಲಿತಾಂಶ ಪ್ರಕಟಿಸಿ, ಬೇಗನೆ ತರಗತಿ ಆರಂಭಿಸುತ್ತಾರೆ ಎಂದರು.

ವಿವಿಯಲ್ಲಿ ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ. ಸದ್ಯ ಎರಡ್ಮೂರು ಯೋಜನೆಗಳು ಬಂದಿವೆ. ದುಂದುವೆಚ್ಚಗಳಿಗೆ ಕಡಿವಾಣ ಹಾಕಿದ ಪರಿಣಾಮ ವಿವಿಗೆ ಕಳೆದ 13 ತಿಂಗಳಲ್ಲಿ 1.50 ಕೋಟಿ ರೂ. ಲಾಭ ದೊರಕಿಗೆ ಎಂದರು.

ಎಂಸಿಎ, ಎಂಕಾಂ ಕಲಿಯಲು ಅನುಕೂಲವಾಗುವ ದಿಶೆಯಲ್ಲಿ ಬಿ.ಕಾಂ. ಪದವಿಯ ದ್ವಿತೀಯ ಸೆಮಿಸ್ಟರ್‌ನಲ್ಲಿ ಕ್ವಾಂಟಿಟೇಟಿವ್ ಅನಾಲಿಸಿಸ್ ಎಂಬುದಾಗಿ ಬದಲಾಯಿಸಿ ಪಠ್ಯಕ್ರಮ ಸಲ್ಲಿಸಲಾಗಿದೆ ಎಂದು ಕುಲಪತಿ ಹೇಳಿದರು.

ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಹಣಕಾಸು ಕುಲಸಚಿವ ಪ್ರೊ.ಸಂಗಪ್ಪ, ಆಡಳಿತ ಕುಲಸಚಿವ ರಾಜು ಮೊಗವೀರ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article