
ಪ್ರತಿಭೆ ಮತ್ತು ಪರಿಶ್ರಮದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ: ಡಾ. ಸದಾನಂದ ಪೂಜಾರಿ
Saturday, May 31, 2025
ಮಂಗಳೂರು: ಪ್ರತಿಭೆ ಮತ್ತು ಪರಿಶ್ರಮದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಅತಿ ಮುಖ್ಯ ಎಂದು ವೆನ್ ಲಾಕ್ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸದಾನಂದ ಪೂಜಾರಿ ಹೇಳಿದರು.
ಅವರು ಇಂದು ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ-2024-25 ನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಿಂದ ನಾನು ಬಂದವನು. ಎಸ್.ಎಸ್.ಎಲ್.ಸಿ.ಯಲ್ಲಿ ನಾನು ಪ್ರೇರಣೆದಾಯ ಮಾತುಗಳನ್ನು ಕೇಳಿ ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ಈಗ ವೈದ್ಯಕೀಯ ವೃತ್ತಿಯ ಜೊತೆಗೆ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಶಿಕ್ಷಕರಾದವರು ಜೀವನ ಪೂರ್ತಿ ವಿದ್ಯಾರ್ಥಿಯಾಗಿ ಓದುತ್ತಿರಬೇಕು. ಆಗ ಮಾತ್ರ ಆತ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದರು.
ಪ್ರತಿಯೊಬ್ಬರೂ ತಮ್ಮ ಆಸಕ್ತಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಮತ್ತೊಬ್ಬರ ಒತ್ತಾಯಕ್ಕೆ ಒಳಗಾಗಿ ಕೆಲಸ ಮಾಡಬಾರದು. ನಾವು ನಮ್ಮ ಇಚ್ಚೆಯ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಾಗ ಅಲ್ಲಿ ಯ ಕಷ್ಟಗಳನ್ನು ಅರಿತು ಮೇಲೆ ಬರಬೇಕು ಆಗ ನಾವು ಆ ಕ್ಷೇತ್ರದ ಮಹತ್ವವನ್ನು ಅರಿತು ಅದರ ಮೇಲೆ ಪ್ರೀತಿ ಇರಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ. ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಶಿಸ್ತು ಮತ್ತು ಸಂಯಮವನ್ನು ಕಲಿಯುವುದು ಬಹಳ ಮುಖ್ಯ ಎಂದ ಅವರು ನಮ್ಮ ಜೀವನದ ಕಾಲು ಭಾಗವನ್ನು ನಾವು ಕಾಲೇಜಿನಲ್ಲಿ ಕಲಿಯುತ್ತೇವೆ. ಆ ಕಾಲು ಭಾಗ ಮುಂದಿನ ಮುಕ್ಕಾಲು ಭಾಗದ ಜೀವನ ಉಜ್ವಲಗೊಳಿಸಿಕೊಳ್ಳಲು ಈ ಕಾಲೇಜು ಜೀವನ ಬಹಳ ಅಗತ್ಯ. ಕಾಲೇಜಿನಲ್ಲಿ ಪಾಠ ಆದ ಮೇಲೆ ಪರೀಕ್ಷೆ ಬರುತ್ತೇವೆ, ಆದರೆ ನಂತರದ ಜೀವನದಲ್ಲಿ ಪ್ರತಿನಿತ್ಯ ಪರೀಕ್ಷೆಗಳು ಬರುತ್ತಿರುತ್ತವೆ. ಆ ಪರೀಕ್ಷೆಯ ನಂತರ ನಾವು ಪಾಠ ಕಲಿಯುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಪ್ರಶಸ್ತಿಯನ್ನು ವಿತರಿಸಲಾಯಿತು.
ವಾರ್ಷಿಕ ವರದಿಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ದುಗ್ಗಪ್ಪ ಕಜೇಕಾರು ಮಂಡಿಸಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಸ್ನಾತಕ ವಿಭಾಗದ ಸಂಯೋಜಕಿ ಪ್ರೊ. ವಸಂತಿ, ಸಾಂಸ್ಕೃತಿಕ ವಿಭಾಗದ ಡಾ. ಕೃಷ್ಣಪ್ರಭಾ, ವಿಧ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅಕ್ಷತಾ ಸ್ವಾಗತಿಸಿ, ಐಕ್ಯೂಎಸಿ ಸಹಸಂಯೋಜಕಿ ಡಾ. ಜ್ಯೋತಿಪ್ರಿಯಾ ನಿರೂಪಿಸಿದರು. ವಿದ್ಯಾರ್ಥಿನಿ ಸೃಷ್ಟಿ ವಂದಿಸಿದರು.