
ಅಶ್ವಿನಿ ಅವರಿಗೆ ಸರಕಾರಿ ಉದ್ಯೋಗ ನೀಡಬೇಕು: ಎನ್. ರವಿ ಕುಮಾರ್ ಆಗ್ರಹ
ಉಳ್ಳಾಲ: ಮಳೆ ದುರಂತದಿಂದ ಎರಡೂ ಕಾಲುಗಳನ್ನು ಕಳೆದುಕೊಂಡ ತಾಯಿ ಅಶ್ವಿನಿ ಅವರಿಗೆ ಸರಕಾರಿ ಉದ್ಯೋಗ ನೀಡಬೇಕು ಹಾಗೂ ಜಿಲ್ಲೆಯ ಗುಡ್ಡವಾರು ಪ್ರದೇಶಗಳಲ್ಲಿ ಅಪಾಯವನ್ನು ಸೂಚಿಸುವ ಮನೆಗಳನ್ನು ತಕ್ಷಣಕ್ಕೆ ಸ್ಥಳಾಂತರಗೊಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ, ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿ ಕುಮಾರ್ ಆಗ್ರಹಿಸಿದ್ದಾರೆ.
ಮೊಂಟೆಪದವು ಪಂಬದಹಿತ್ತಿಲು ಕೋಡಿ ಕೊಪ್ಪಲದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಾವನ್ನಪ್ಪಿದ ಅಜ್ಜಿ ಹಾಗೂ ಮೊಮ್ಮಕ್ಕಳಿಬ್ಬರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿ, ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ವಿನಿ, ಮಾವ ಕಾಂತಪ್ಪ ಪೂಜಾರಿ ಅವರ ಆರೋಗ್ಯ ವಿಚಾರಣೆ ನಡೆಸಿ ಬಳಿಕ ಮಾತನಾಡಿದರು.
ಸರಕಾರದಿಂದ ನೊಂದ ಕುಟುಂಬಕ್ಕೆ ಸಹಕಾರ ಸಿಗಬೇಕಿದೆ. ಮಕ್ಕಳಿಬ್ಬರನ್ನು ಕಳೆದುಕೊಂಡ ತಾಯಿ ಕಾಲುಗಳನ್ನು ಕಳೆದುಕೊಂಡಿರುವುದು ಅತೀವ ದುಃಖವನ್ನುಂಟು ಮಾಡಿದೆ. ಮಳೆ ಅನಾಹುತದ ಮುನ್ನವೇ ಜಿಲ್ಲಾಡಳಿತ, ಸರಕಾರಗಳು ಜನರ ರಕ್ಷಣೆಯಲ್ಲಿ ಸನ್ನದ್ಧವಾಗಿರಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಶೀಘ್ರವೇ ಚೇತರಿಸಿಕೊಳ್ಳಲಿ. ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರವನ್ನು ಕುಟುಂಬಕ್ಕೆ ಒದಗಿಸಬೇಕಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್, ಕ್ಷೇತ್ರ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಹೇಮಂತ್ ಶೆಟ್ಟಿ, ಸುರೇಶ್ ಆಳ್ವ ತಲಪಾಡಿ ಮತ್ತಿತರರು ಇದ್ದರು.