
ಅಬ್ದುಲ್ ರೆಹ್ಮಾನ್ ಕೊಲೆ: ಕಾಂಗ್ರೆಸ್‌ಗೆ ಅಲ್ಪಸಂಖ್ಯಾತ ನಾಯಕರು, ಕಾರ್ಯಕರ್ತರು ರಾಜೀನಾಮೆ
ಮಂಗಳೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ಮತ್ತು ಅದನ್ನು ತಡೆಯುವಲ್ಲಿ ರಾಜ್ಯ ಗೃಹ ಇಲಾಖೆಯ ವೈಫಲ್ಯ ಮತ್ತು ಜಿಲ್ಲೆಯ ಮುಸ್ಲಿಮರ ಕಡೆಗಣನೆಗೆ ಬೇಸತ್ತು ಮಂಗಳೂರಿನ ಬೋಳಾರದಲ್ಲಿರುವ ಶಾದಿ ಮಹಲ್ ಸಭಾಂಗಣದಲ್ಲಿ ಗುರುವಾರ ನಡೆದ ತುರ್ತು ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದಿಂದ ಹಿಡಿದು ರಾಜ್ಯ ಘಟಕದವರೆಗಿನ ವಿವಿಧ ಹುದ್ದೆಗಳಲ್ಲಿರುವ ಮುಸ್ಲಿಂ ಮುಖಂಡರು ಹಾಗೂ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ಪ್ರಕಟಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಸ್ಲಿಂ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ ಸಮುದಾಯಕ್ಕೆ ಆಗಿರುವ ಅನ್ಯಾಯ, ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಮಾತನಾಡುತ್ತಿದ್ದಂತೆ ಕಾರ್ಯಕರ್ತರು ವೇದಿಕೆಗೆ ನುಗ್ಗಿ ”ಬೇಕೆ ಬೇಕು ನಮಗೆ ನ್ಯಾಯಬೇಕು” ಎಂದು ಆಗ್ರಹಿಸಿದರು.
ಎಂ ಎಸ್ ಮುಹಮ್ಮದ್, ಮಾಜಿ ಕಾರ್ಪೊರೇಟರ್ ಅಬ್ದುಲ್ ರವೂಫ್, ಸುಹೈಲ್ ಕಂದಕ್ ಜನಸಮೂಹವನ್ನು ಸಮಾಧಾನ ಪಡಿಸಲು ಯತ್ನಿದರು. ಆದರೆ ಕಾರ್ಯಕರ್ತರು ಪಟ್ಟು ಬಿಡಲಿಲ್ಲ. ಕೊನೆಗೆ ನಾಯಕರು ನಮ್ಮ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂಎಸ್ ಮುಹಮ್ಮದ್, ಅಲ್ಪಸಂಖ್ಯಾತ ಅಧ್ಯಕ್ಷ ಸ್ಥಾನಕ್ಕೆ ಶಾಹುಲ್ ಹಮೀದ್ ಸಾಮೂಹಿಕ ರಾಜೀನಾಮೆ ನೀಡಿರುವುದಾಗಿ ಪ್ರಕಟಿಸಿದರು.
ಕೋಲಾಹಲ, ಗದ್ದಲ..
ಕೊಳತ್ತಮಜಲ್‌ನಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಅಬ್ದುಲ್ ರಹ್ಮಾನ್ ಅವರ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ನಡೆಯುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ರಾಜೀನಾಮೆ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಅದರಂತೆ ಗುರುವಾರ ಸಭೆ ಸೇರಿದಾಗ ಮುಖಂಡರು ಮಾತು ಬದಲಿಸಿ ಒಂದುವಾರ ರಾಜೀನಾಮೆಯನ್ನು ಮುಂದೆ ಹಾಕಿ ಕಾದು ನೋಡುವ ತಂತ್ರದ ಮೊರೆ ಹೋಗಿರುವುದು, ಸಭೆಯಲ್ಲಿ ನೆರೆದಿದ್ದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.
ನಾವು ರಾಜೀನಾಮೆ ನೀಡುವ ತೀರ್ಮಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದರಿಂದ ಸಭಾಂಗಣದಲ್ಲಿ ಏನು ನಡೆಯುತ್ತಿದೆ ಎಂದು ಯಾರಿಗೂ ಕೇಳಿಸದಷ್ಟು ಗದ್ದಲವುಂಟಾಯಿತು. ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಖಂಡರು ಹರಸಾಹಸ ಪಟ್ಟರು.
ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಮುಸ್ಲಿಂ ಮುಖಂಡರು ಒಬ್ಬಬ್ಬರಾಗಿಯೇ ರಾಜೀನಾಮೆ ಘೋಷಣೆ ಮಾಡಿದರು. ಸುಹೇಲ್ ಕಂದಕ್ ಮೊದಲು ಹುದ್ದೆಗೆ ರಾಜೀನಾಮೆ ಘೋಷಿಸಿದರು. ಆ ಬಳಿಕ ಶಾಹುಲ್ ಹಮೀದ್, ಎಂ.ಎಸ್. ಮುಹಮ್ಮದ್ ಸೇರಿದಂತೆ ಒಬ್ಬೊಬ್ಬರಾಗಿ ರಾಜೀನಾಮೆ ಘೋಷಿಸಿದರು.