
‘ವೀಸಾ ವಂಚಕನ ಬಂಧಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಿ’
ಮಂಗಳೂರು: ವೀಸಾ ವಂಚಕ ಆಲ್ವಿನ್ ಡಿಮೆಲ್ಲೊರನ್ನು ತಕ್ಷಣ ಬಂಧಿಸಿ, ಸಂತ್ರಸ್ತರಿಗೆ ಹಣ ವಾಪಾಸ್ಸು ಪಡೆಯುವಲ್ಲಿ ಸೂಕ್ತ ಸೂಕ್ತ ಕ್ರಮ ಕೈಗೊಳ್ಳಿ ಎಂದು ತುಳುನಾಡ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಕಂಕನಾಡಿಯಲ್ಲಿ ಆಲ್ವಿನ್ ಡಿಮೆಲ್ಲೊ ಎಂಬವರು ಹೊರದೇಶದಲ್ಲಿ ಕೆಲಸ ಕೊಡಿಸುವ ಏಜೆಂಟ್ ಸಂಸ್ಥೆಯನ್ನು ಹೊಂದಿದ್ದು, ಅವರು ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನೂರಾರು ಜನರಿಗೆ ಆಲ್ವಿನ್ ಡಿಮೆಲ್ಲೊ ಹಾಗೂ ಅವರ ಪತ್ನಿಯ ಮಾತುಗಳನ್ನು ನಂಬಿ ಆನ್‌ಲೈನ್, ನಗದು ಮೂಲಕ ಆಲ್ವಿನ್ ಡಿಮೆಲ್ಲೊರವರ ಖಾತೆಗೆ ಲಕ್ಷಾಂತರ ಹಣವನ್ನು ಪಾವತಿಸಿದ್ದಾರೆ. ಆದರೆ ಸಮಯ ಕಳೆದಂತೆಲ್ಲಾ ವೀಸಾ ಏಜೆಂಟನು ವೀಸಾ ಇಂದು ಬರುತ್ತದೆ. ನಾಳೆ ಬರುತ್ತದೆ ಎಂದು ಆಶ್ವಾಸನೆ ನೀಡುತ್ತಾ ಕಾಲ ಕಳೆದರೇ ಹೊರತು ಉದ್ಯೋಗ ಕೊಡಿಸಲಿಲ್ಲ. ಸ್ವಲ್ಪ ಸಮಯದ ಬಳಿಕ ಏಜೆಂಟರ ಬಗ್ಗೆ ಸಂಶಯ ಬಂದು ಸಂತ್ರಸ್ಥರು ಕೊಟ್ಟ ಹಣವನ್ನು ವಾಪಾಸ್ಸು ಕೇಳಿದಾಗ ಅವ್ಯಾಚ್ಯ ಶಬ್ದಗಳಿಂದ ಬೈಗುಳ ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇವೆ ಎಂದು ಹೇಳಿದಾಗ ಇಂದು, ನಾಳೆ ಕೊಡುತ್ತೇನೆಂದು ಹೇಳಿ ಸಮಯ ವ್ಯರ್ಥ ಮಾಡುತ್ತಿದ್ದು, ಏಜೆಂಟರು ಮೊಬೈಲಿಗೆ ಸತತವಾಗಿ ಕರೆ ಮಾಡಿದಾಗ ಉತ್ತರಿಸದೆ ಕಚೇರಿಗೆ ಹೋದರು ಸಂಪರ್ಕಕ್ಕೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ವಿದೇಶದಲ್ಲಿ ಉದ್ಯೋಗ ಬಯಸಿದ ನೂರಾರು ಉದ್ಯೋಗ ಆಕಾಂಕ್ಷಿಗಳು ಈತನ ಮೋಸದ ಜಾಲಕ್ಕೆ ಸಿಕ್ಕಿರುವ ಬಗ್ಗೆ ಮಾಹಿತಿ ಇದ್ದು, ಕೋಟ್ಯಾಂತರ ರೂಪಾಯಿಗಳನ್ನು ವಂಚನೆ ಮಾಡಿರುವ ಸಂಶಯವಿದೆ. ತುಂಬಾ ಆರ್ಥಿಕ ಸಂಕಷ್ಟ ಪಡುತ್ತಿರುವ ಸಂತ್ರಸ್ತರು ವೀಸಾ ಬರುವ ನಂಬಿಕೆ ಸುಳ್ಳಾಗಿದ್ದು, ದಿಕ್ಕು ತೋಚದ ಪರಿಸ್ಥಿತಿಯಲ್ಲಿದ್ದಾರೆ ಎಂದರು.
ವಂಚನೆಯ ಕುರಿತಂತೆ ಮಂಗಳೂರು ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿ ನ್ಯಾಯಕ್ಕಾಗಿ ಕೋರಿದ್ದೇವೆ ಎಂದ ಅವರು, ವಂಚಕ ಆಲ್ವಿನ್ ಡಿಮೆಲ್ಲೊ ರವರನ್ನು ತಕ್ಷಣ ಬಂಧಿಸಿ, ಉದ್ಯೋಗ ಆಕಾಂಕ್ಷಿಗಳು ಆತನಿಗೆ ನೀಡಿದ ಹಣವನ್ನು ಮರಳಿ ಪಡೆಯಲು ಉನ್ನತ ಮಟ್ಟದ ಕ್ರಮಕೈಗೊಳ್ಳಬೇಕು, ವಿಳಂವವಾದಲ್ಲಿ ಸಂತ್ರಸ್ತರ ಜತೆಗೂಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.