
ದ.ಕ. ಮುಂದುವರೆದ ಮಳೆ-ರೆಡ್ ಆಲರ್ಟ್: ವ್ಯಾಪಕ ಹಾನಿ
ಮಂಗಳೂರು: ಕರಾವಳಿಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಗಾಳಿ ಸಹಿತ ವ್ಯಾಪಕ ಮಳೆಯಾಗಿದೆ. ಮೇ 28ರ ತನಕ ಜಿಲ್ಲೆಗೆ ರೆಡ್ ಆಲರ್ಟ್ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ತಾಸುಗಳಲ್ಲಿ ಜಿಲ್ಲೆಯ ಬೆಳ್ತಂಗಡಿ ಶಿರ್ತಾಡಿಯಲ್ಲಿ ಗರಿಷ್ಠ 18 ಸೆಂ.ಮೀ ಮಳೆ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆಯಲ್ಲಿ 17.2 ಸೆಂ.ಮೀ, ಮರೋಡಿಯಲ್ಲಿ 15.4 ಸೆಂ.ಮೀ, ಲಾಯಿಲದಲ್ಲಿ 11.6 ಸೆಂ.ಮೀ, ಮಂಗಳೂರಿನ ಬಾಳದಲ್ಲಿ 13 ಸೆಂ.ಮೀ, ಎಕ್ಕೂರಿನಲ್ಲಿ 12.7 ಸೆಂ.ಮೀ, ಕುಕ್ಕಿಪಾಡಿಯಲ್ಲಿ 12.2 ಸೆಂ.ಮೀ, ಬಂಟ್ವಾಳ ತಾಲೂಕಿನ ರಾಯಿಯಲ್ಲಿ 10.7 ಸೆಂ.ಮೀ, ಕಾವಳಪದವಿನಲ್ಲಿ 10.6 ಸೆಂ.ಮೀ, ಕಾವಳಮೂಡೂರಿನಲ್ಲಿ 10.4 ಸೆಂ.ಮೀ, ಸರಪಾಡಿಯಲ್ಲಿ 10 ಸೆಂ.ಮೀ ಮಳೆ ದಾಖಲಾಗಿದೆ.
ರೆಡ್ ಆಲರ್ಟ್..:
ಭಾರತೀಯ ಹವಾಮಾನ ಇಲಾಖೆಯು ಕರಾವಳಿಯಲ್ಲಿ ಮೇ 28ರವರೆಗೆ ರೆಡ್ ಅಲರ್ಟ್ ಘೋಷಿಸಿದೆ. ಗಂಟೆಗೆ 40ರಿಂದ 50ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಿದೆ.
ವಾಡಿಕೆಗಿಂತ ಮೊದಲು..:
ಕೇರಳಕ್ಕೆ ವಾಡಿಕೆಯಂತೆ ಮೇ ತಿಂಗಳ ಅಂತ್ಯ ಅಥವಾ ಜೂನ್ ಪ್ರಥಮ ವಾರದಲ್ಲಿ ಮುಂಗಾರು ಆಗಮಿಸುತ್ತದೆ. ಕಳೆದ ವರ್ಷ ಮೇ 30ಕ್ಕೆ ಮುಂಗಾರು ಕೇರಳ ಪ್ರವೇಶಿಸಿತ್ತು. ಈ ಸಲ ಮುಂದಿನ 24 ತಾಸಿನೊಳಗೆ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳಕ್ಕೆ ಮುಂಗಾರು ಆಗಮನವಾದ ಬಳಿಕ ಕರ್ನಾಟಕದ ಕರಾವಳಿಯನ್ನು ಪ್ರವೇಶಿಸುತ್ತದೆ. ಈ ಸಲ ವಾಡಿಕೆಗಿಂತ ಮೊದಲೇ ಕರಾವಳಿಗೆ ಮುಂಗಾರು ಆಗಮನದ ನಿರೀಕ್ಷೆ ಇದೆ.
ವ್ಯಾಪಕ ಹಾನಿ..:
ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಮಳೆಗೆ ವ್ಯಾಪಕ ಹಾನಿಯಾಗಿದೆ. ಅಲ್ಲಲ್ಲಿ ಗೋಡೆ ಕುಸಿದು ಮನೆಗೆ ಹಾನಿಯಾಗಿದೆ. ಮರಗಳು ಉರುಳಿದೆ. ಕೆಲವೆಡೆ ರಸ್ತೆಗೆ ಮರಗಳು ಬಿದ್ದು ಸಂಚಾರಕ್ಕೆ ತೊಡಕಾಗಿದೆ. ವ್ಯಾಪಕ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿ ಕೃತಕ ನೆರೆಯಾಗಿದೆ.
ಬೆಳಗ್ಗಿನಿಂದಲೂ ಬಿರುಸಾದ ಗಾಳಿ ಮಳೆಯಾದರೂ ಜೀವನದಿ ನೇತ್ರಾವತಿಯಲ್ಲಿ ನೀರಿನ ಹರಿವಿನಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಿಲ್ಲ, ಬೆಳಗ್ಗೆ 3.9 ಮಿ.ಮೀ.ನಲ್ಲಿ ನೇತ್ರಾವತಿ ಹರಿಯುತಿತ್ತು.