
ಪ್ರಧಾನಿಗೆ ಟ್ರಂಪ್ ಹೆಸರು ಹೇಳಲು ಭಯ-ಪ್ರಶ್ನೆಗಳಿಗೆ ಉತ್ತರ ನೀಡಬೇಕು: ದಿನೇಶ್ ಗುಂಡೂರಾವ್
ಮಂಗಳೂರು: ಪೆಹಲ್ಗಾಂ ಘಟನೆ ಹಾಗೂ ಭಾರತ ಪಾಕ್ ನಡುವಿನ ಕದನ ವಿರಾಮ ಸೇರಿದಂತೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸರ್ವ ಪಕ್ಷಗಳ ಸಭೆ ಕರೆದು ಪ್ರಜಾಪ್ರಭುತ್ವದಲ್ಲಿ ನಾವು ಕೇಳುವ ಪ್ರಶ್ನೆ, ಅನುಮಾನಗಳಿಗೆ ಅವರು ಉತ್ತರ ನೀಡಬೇಕು. ಅದಕ್ಕಾಗಿ ಸರ್ವ ಪಕ್ಷ ಕರೆಯಲು ವಿಪಕ್ಷ ನಾಯಕರು ಒತ್ತಾಯಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪೆಹಲ್ಗಾಂ ಘಟನೆಗೆ ಯಾರು ಕಾರಣ ಎಂದು ತಿಳಿಸಬೇಕು. ಆ ಘಟನೆಗೆ ಕಾರಣರಾದವರನ್ನು ಎಲ್ಲಿದ್ದರೂ ಹುಡುಕಿ ಮಣ್ಣು ಪಾಲು ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದರು. ಅವರ ದಿಟ್ಟ ನಿಲುವಿಗೆ ನಾವು ಬೆಂಬಲ ನೀಡಿದ್ದೇವೆ. ಸೇನೆಯ ಬಗ್ಗೆ ನಾವೂ ತಿರಂಗ ಯಾತ್ರೆ ಮಾಡಿದ್ದೇವೆ. ಈ ನಡುವೆ ಭಾರತ ಪಾಕ್ ನಡುವೆ ಕದನ ವಿರಾಮ ಘೋಷಿಸಲಾಯಿತು. ಈ ವಿಷಯಗಳನ್ನು ರಾಜಕಾರಣಕ್ಕೆ ಬಳಸದೆ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಹೇಳಿದರು.
ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಮಾಧ್ಯಮ ಎದುರು ಬಂದು ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಹಿಂದೆ ಮನಮೋಹನ್ ಸಿಂಗ್ ಅವರೂ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆದರೆ ಈಗಿನ ನಮ್ಮ ಪ್ರಧಾನ ಮಂತ್ರಿಗೆ ಯಾರೂ ಪ್ರಶ್ನೆ ಕೇಳುವ ಹಾಗಿಲ್ಲ. ಮಾಧ್ಯಮದರ ಬಗ್ಗೆ ಅವರಿಗೆ ಕ್ಯಾರೇ ಇಲ್ಲ. ಉತ್ತರ ಕೊಡಲು ತಯಾರಿಲ್ಲದೆ, ಬಿಹಾರದಲ್ಲಿ ನಿಂತು ಭಾಷಣ ಮಾಡುವುದು, ಮನ್ ಕಿ ಬಾತ್ ಹೇಳಿಕೆ ಕೊಟ್ಟು ಹೋಗುವುದು ನಮಗೆ ಬೇಕಾಗಿಲ್ಲ. ಸುಮ್ಮನೆ ಅವರು ಹೇಳಿದ್ದನ್ನೆಲ್ಲಾ ನಾವು ನಂಬಲಾಗದು. ಸುಳ್ಳಿನ ಆಧಾರದಲ್ಲಿ ದಂತ ಕತೆ ಕಟ್ಟುವ ಸಾಮರ್ಥ್ಯ ಪ್ರಧಾನಿ ಮೋದಿಗಿದೆ. ಅದರಲ್ಲಿ ಅನುಮಾನವಿಲ್ಲ. ಅವರಿಗೆ ಟ್ರಂಪ್ ಎಂದು ಹೆಸರು ಹೇಳಲು ಮೋದಿ ಭಯ ಪಡುತ್ತಾರೆ. ಆದರೆ ದೇಶದ ಹಿತರಕ್ಷಣೆ, ಭದ್ರತೆ, ಸುರಕ್ಷತೆ ವಿಷಯದಲ್ಲಿ ಅವರು ರಾಜಕಾರಣ ಮಾಡಬಾರದು. ನಾವೆಲ್ಲಾ ಒಂದಾಗಿದ್ದು, ಪಾರದರ್ಶಕತೆ, ಸ್ಪಷ್ಟಯ ಮೂಲಕ ನಮಗೆ ವಿಶ್ವಾಸ ಭರಿಸುವ ಕಾರ್ಯ ಪ್ರಧಾನ ಮಂತ್ರಿ ಮಾಡಬೇಕು ಎಂದರು.
ಕಾಂಗ್ರೆಸ್‌ನರು ಸೇನೆಯನ್ನು ಟೀಕೆ ಮಾಡುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಬಿಜೆಪಿಯ ಮಂತ್ರಿಯೇ ಸೋಫಿಯ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೋರ್ಟ್‌ನಿಂದ ಎಫ್‌ಐಆರ್ ಆಗೋ ಸನ್ನಿವೇಶ ಬಂದಿದೆ. ಕೋರ್ಟ್ ಮಧ್ಯ ಪ್ರವೇಶ ಮಾಡಿ ಎಫ್‌ಐಆರ್ ಹಾಕಬೇಕಾದ ಪರಿಸ್ಥಿತಿ ಇದೆ ಎಂದಾದರೆ ಬಿಜೆಪಿಯ ಮುಖಂಡರು, ಕಾರ್ಯಕರ್ತರಿಗೆ ನಾವು ಏನು ಹೇಳಬೇಕು ಎಂದು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪಹಲ್ಗಾಂನಲ್ಲಿ ಪತಿಯರನ್ನು ಕಳೆದುಕೊಂಡ ಮಹಿಳೆಯರೇ ಜನತೆ ಮುಂದೆ ಬಂದು ಇದನ್ನು ಹಿಂದೂ ಮುಸ್ಲಿಂ ವಿಷಯವ್ನಾಗಿಸಬೇಡಿ ಎಂದು ಮನವಿ ಮಾಡಿಕೊಂಡರು. ಕಾಶ್ಮೀರಿಗಳು, ಅಲ್ಲಿನ ಮುಸಲ್ಮಾನರೂ ನಮಗೆ ಸಹಕರಿಸಿದ್ದಾರೆ ಎಂದು ಹೇಳುವ ಧೈರ್ಯ, ಹೃದಯ ಶ್ರೀಮಂತಿಕೆ ತೋರಿದ್ದಾರೆ. ಆದರೆ ಬಿಜೆಪಿಯವರು ಇದನ್ನ ಹಿಂದೂ ಮುಸ್ಲಿಂ ಆಗಿಸುತ್ತಿದ್ದಾರೆ. ವಿದೇಶಾಂಗ ಸಚಿವರು ಕದನ ವಿರಾಮ ಘೋಷಿಸಿದ್ದು ಎಂಬುದಾಗಿ ಅವರ ಮಗಳ ಬಗ್ಗೆ ಬಿಜೆಪಿಯವರು ಅತ್ಯಂತ ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ಆದರೆ ಈ ವಿಷಯದಲ್ಲಿ ಟ್ರೋಲ್ ಮಾಡಬೇಕಾಗಿದ್ದು ಪ್ರಧಾನಿಯವರನ್ನು. ಪ್ರಧಾನ ಮಂತ್ರಿ ಒಪ್ಪಿಗೆ ಇಲ್ಲದೆ ವಿದೇಶಾಂಗ ಕಾರ್ಯದರ್ಶಿ ಕದನ ವಿರಾಮ ಘೋಷಿಸಲು ಆಗುವುದಿಲ್ಲ.
ದೇಶದ ಜನರು ಪ್ರಶ್ನಿಸುತ್ತಿದ್ದಾರೆ. ಜನತೆ ಉತ್ತರ ಬಯಸುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಈಗಾಗಲೇ ತಾನು ಯುದ್ಧ ನಿಲ್ಲಿಸಿರುವುದಾಗಿ ಘೋಷಣೆ ನೀಡಿದ್ದಾರೆ. ಟ್ರಂಪ್ ಹೇಳಿಕೆ ನೀಡಿರುವುದು ಸತ್ಯ. ಭಾರತ ಪಾಕ್ ನಡುವೆ ಕದನ ವಿರಾಮ ಆಗಿದೆ ಎಂದು ಪ್ರಥಮ ಬಾರಿಗೆ ಪ್ರಪಂಚಕ್ಕೆ ಗೊತ್ತಾಗಿರುವುದು ಟ್ರಂಪ್ ಹೇಳಿರುವುದರಿಂದ ಎಂದ ಅವರು,. ವಿದೇಶಾಂಗ ಸಚಿವಾಲಯ ಈಗಾಗಲೇ ಅಮೆರಿಕ ಅಧ್ಯಕ್ಷ ಹೇಳಿದಕ್ಕೆ ಕದನ ವಿರಾಮವಾಗಿಲ್ಲ ಎಂದು ಸ್ಪಷ್ಟನೆ ನೀಡಿದೆಯಲ್ಲ ಎಂಬ ಪ್ರಶ್ನೆಗೆ, ಪ್ರಧಾನ ಮಂತ್ರಿ ಈ ವಿಷಯದ ಬಗ್ಗೆ ಸ್ಪಷ್ಟ ಹೇಳಿಕೆ ನೀಡಲಿ ಎಂದರು.
56 ಇಂಚು ಎದೆಯ ಪ್ರಧಾನ ಮಂತ್ರಿಗೆ ಟ್ರಂಪ್ ಎಂದು ಹೆಸರು ಹೇಳಲು ಭಯ ಪಡುತ್ತಿದ್ದಾರೆ. ಅಝರ್ ಬೈಜನ್, ಟರ್ಕಿ ಬಗ್ಗೆ ಮಾತನಾಡುತ್ತಾರೆ. ಅವರ ಜತೆ ವ್ಯಾಪಾರ ನಿಲ್ಲಿಸುತ್ತೇವೆ ಎನ್ನುತ್ತಾರೆ. ಆದರೆ ಪಾಕಿಸ್ತಾನ ಚೀನಾದ ಶಸ್ತ್ರಾಸ್ತ್ರ ಉಪಯೋಗಿಸುತ್ತಿದ್ದು, ಚೀನಾ ಬಗ್ಗೆ ಮಾತನಾಡುವುದಿಲ್ಲ ಎಂದರು.