ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ದಕ್ಷಿಣ ಕನ್ನಡ ಜಿಲ್ಲೆ ಸಮಿತಿಯ ಜಿಲ್ಲಾ ಸಮಾವೇಶ

ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ದಕ್ಷಿಣ ಕನ್ನಡ ಜಿಲ್ಲೆ ಸಮಿತಿಯ ಜಿಲ್ಲಾ ಸಮಾವೇಶ


ಮಂಗಳೂರು: ನಗರದ ಕೊಡಿಯಾಲ್ ಬೈಲ್, ಓಸಿಯನ್ ಪರ್ಲ್ ಹೋಟೇಲ್‌ನಲ್ಲಿ ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸಮಾವೇಶ ನಡೆಯಿತು. 


ಕುಪ್ಮ ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವರವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯನ್ನು ನಾವು ದ.ಕ ಜಿಲ್ಲೆಯಲ್ಲಿ ಗಟ್ಟಿಯಾಗಿ ಸಂಘಟಿಸಬೇಕಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಒಟ್ಟು ೧೦೮ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಿದ್ದು ಇವುಗಳು ವಿದ್ಯಾರ್ಥಿಗಳಿಗೆ ಉತ್ತಮವಾಗಿರುವಂತಹ ಶಿಕ್ಷಣವನ್ನು ನೀಡುತ್ತಿದೆ. ಅನೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಮಾರ್ಗದರ್ಶನವನ್ನು ನೀಡುತ್ತಾ ಬರುತ್ತಿದೆ. ರಾಜ್ಯದ ಪದವಿ ಪೂರ್ವ ಪರೀಕ್ಷೆಯಲ್ಲಿ ಮಾದರಿ ಫಲಿತಾಂಶವನ್ನು ನಿರಂತರವಾಗಿ ಕೊಡುತ್ತಾ ಬರುತ್ತಿದೆ ಎಂದು ಹೇಳಿದರು.


ರಾಜ್ಯದ ಪದವಿ ಪೂರ್ವ ಶಿಕ್ಷಣ ಮಂಡಳಿಯು ಹೊರಡಿಸುವ ಮಾರ್ಗಸೂಚಿಯಲ್ಲಿ ಇರುವ ಅಂಶಗಳಲ್ಲಿ ಅನೇಕ ವಿಷಯಗಳನ್ನು ಮಾರ್ಪಾಡು ಮಾಡಲು ಸರ್ಕಾರವನ್ನು ಇತ್ತೀಚೆಗೆ ನಾವು ಆಗ್ರಹಿಸಿದ್ದೇವೆ. ಮುಂದಿನ ದಿನಗಳಲ್ಲಿಯೂ ನಾವು ಒಟ್ಟಾಗಿ ಒಗ್ಗಟ್ಟಾಗಿ ನಮ್ಮ ಬೇಡಿಕೆಗಳನ್ನು ಸರಕಾರ ಈಡೇರಿಸುವಂತೆ ಆಗ್ರಹಿಸಬೇಕಾಗಿದೆ. ನಮ್ಮ ಸಂಘಟನೆ ಮತ್ತು ಸರಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಪೂರಕವಾಗಿರುವ ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಸಂಸ್ಥೆಯ ಸದಸ್ಯತ್ವವನ್ನು ಪಡೆಯುವುದರ ಮೂಲಕ ಕಾರ್ಯ ಪ್ರವೃತ್ತರಾಗಬೇಕು ಎಂದರು.


ಕುಪ್ಮದ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್ ಮಾತನಾಡಿ, ನಾವೆಲ್ಲರೂ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದರಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸಿದ್ದೇವೆ. ಕುಪ್ಮದ ಸಂಘಟನೆಯನ್ನು ಬೆಳೆಸುವುದರಲ್ಲಿಯೂ ಪ್ರತಿಯೊಬ್ಬರು ಕಾರ್ಯ ಪ್ರವೃತ್ತರಾಗಬೇಕು. ನಾವೆಲ್ಲರೂ ಕುಪ್ಮದ ಸದಸ್ಯರಾಗುವುದರ ಮೂಲಕ ಸಂಸ್ಥೆಯ ಕಾರ್ಯವನ್ನು ವಿಸ್ತರಿಸಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ಜಿಲ್ಲೆಯ ಸುಮಾರು 50 ಕ್ಕಿಂತ ಹೆಚ್ಚಿನ ಆಡಳಿತ ಮಂಡಳಿಯ ಆಮಂತ್ರಿತ ಸದಸ್ಯರ ಜೊತೆ ಸಂವಾದವನ್ನು ನಡೆಸಲಾಯಿತು. ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳ ಕುರಿತಂತೆ ಅನೇಕ ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರು ವಿಷಯಗಳನ್ನು ಪ್ರಸ್ತಾಪ ಮಾಡಿದರು. ಸಮಾವೇಶದಲ್ಲಿ ಎಲ್ಲರ ಅಭಿಪ್ರಾಯವನ್ನು ಕ್ರೋಡಿಕರಿಸಿ ಸಮಿತಿಯ ರಾಜ್ಯಾಧ್ಯಕ್ಷರು ವಿಸ್ತೃತವಾಗಿರುವ ಮನವಿ ಪತ್ರವನ್ನು ರಾಜ್ಯದ ಶಿಕ್ಷಣ ಸಚಿವರಿಗೆ ಸಲ್ಲಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.


ದ.ಕ ಜಿಲ್ಲಾ ಸಮಿತಿಗೆ 3 ಜನರ ಆಯ್ಕೆ:

ಜಿಲ್ಲಾ ಅಧ್ಯಕ್ಷರಾಗಿ ಎಕ್ಸೆಲೆಂಟ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾಗಿ ಯುವರಾಜ್ ಜೈನ್, ಕಾರ್ಯದರ್ಶಿಯಾಗಿ ಸೂರಜ್ ಇಂಟರ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾಗಿ ಡಾ. ಮಂಜುನಾಥ್ ರೇವಣ್‌ಕರ್ ಹಾಗೂ ಕೋಶಾಧಿಕಾರಿಯಾಗಿ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಧಾನ ಸಲಹೆಗಾರರಾಗಿ ರಮೇಶ್ ಕೆ, ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಡಾ ಮೋಹನ್ ಆಳ್ವ ಅವರು ಘೋಷಣೆ ಮಾಡಿದರು.


ವೇದಿಕೆಯಲ್ಲಿ ಕುಪ್ಮದ ಗೌರವಾಧ್ಯಕ್ಷರಾದ ಡಾ. ಕೆ.ಸಿ ನಾಕ್, ಡಾ. ಎಂ.ಬಿ ಪುರಾಣಿಕ್, ರಾಜ್ಯಾಧ್ಯಕ್ಷರಾದ ಡಾ. ಮೋಹನ್ ಆಳ್ವ, ರಾಜ್ಯ ಕಾರ್ಯದರ್ಶಿ ನರೆಂದ್ರ ಎಲ್ ನಾಯಕ್, ಜಿಲ್ಲಾ ಅಧ್ಯಕ್ಷರಾದ ಯುವರಾಜ್ ಜೈನ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ರೇವಣ್‌ಕರ್, ಕೋಶಾಧಿಕಾರಿ ರಮೇಶ್ ಕೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಯೋಜಕರಾದ ಕರುಣಾಕರ್ ಬಲ್ಕೂರ್‌ರವರು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article