
ಬಡವರ ಸೇವೆಯನ್ನು ದೇವರ ಸೇವೆ ಎಂದು ಪರಿಗಣಿಸುವಂತೆ ಸಾರಿದವರು ವಿವೇಕಾನಂದರು: ಪ್ರಶಾಂತ್ ನೀಲಾವರ
Monday, May 12, 2025
ಮಂಗಳೂರು: ಸ್ವಾಮಿ ವಿವೇಕಾನಂದರು ಬಡವರು, ಶೋಷಿತರು, ಮತ್ತು ದುರ್ಬಲರನ್ನು ಸಹಾನುಭೂತಿಯೊಂದಿಗೆ ನೋಡಬೇಕು ಮತ್ತು ಅವರ ಸೇವೆಯನ್ನು ದೇವರ ಸೇವೆಯೆಂದು ಪರಿಗಣಿಸಬೇಕು ಎಂದು ಸಾರಿದರು ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕ ಪ್ರಶಾಂತ್ ನೀಲಾವರ ಹೇಳಿದರು.
ಅವರು ಇಂದು ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸದಲ್ಲಿ ‘ವಿವೇಕಾನಂದರ ಕನಸಿನ ಭಾರತ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಹಲವು ಕನಸುಗಳನ್ನು ಕಂಡಿದ್ದರು. ಅವರು ಮೌಲ್ಯಾಧಾರಿತ, ನೈತಿಕತೆ ಹಾಗೂ ಸಾಂಸ್ಕೃತಿಕ ಪರಂಪರೆಗಳಲ್ಲಿ ಬೆಳೆದು ಬಂದ ದೇಶವನ್ನೇ ತಮ್ಮ ಕನಸಿನ ಭಾರತವೆಂದು ಪರಿಗಣಿಸಿದ್ದರು. ಅವರ ದೃಷ್ಟಿಯಲ್ಲಿ ಭಾರತವೆಂದರೆ ಧರ್ಮ, ಆತ್ಮಜ್ಞಾನ, ತಪಸ್ಸು ಮತ್ತು ಮಾನವಸೇವೆಗೂ ಆದ್ಯತೆ ನೀಡುವ ದೇಶ ಎಂದು ಭಾವಿಸಿದ್ದರು ಎಂದರು.
ವಿವೇಕಾನಂದರು ಯುವಕರನ್ನು ರಾಷ್ಟ್ರ ನಿರ್ಮಾಣದ ಶಕ್ತಿ ಎಂದು ಭಾವಿಸಿದ್ದರು. ಯುವಜನತೆಗೆ ಶಕ್ತಿಯುತ, ಆತ್ಮವಿಶ್ವಾಸದಿಂದ ಕೂಡಿದ, ಜವಾಬ್ದಾರಿಯುತ ಜೀವಿಗಳಾಗಬೇಕು ಎಂದು ಉಪದೇಶಿಸಿದರು. ಅವರು ಶಿಕ್ಷಣವನ್ನು ದೇಶದ ಪ್ರಗತಿಯ ಮೂಲ ಅಸ್ತ್ರವೆಂದು ಭಾವಿಸಿದರು. ಅಕ್ಷರಜ್ಞಾನಕ್ಕಿಂತ ಬದುಕಿಗೆ ಬೇಕಾದ ಮೌಲ್ಯಗಳ ಶಿಕ್ಷಣ ಮುಖ್ಯವೆಂದು ಒತ್ತಾಯಿಸಿದರು. ಧರ್ಮ, ಜಾತಿ, ಭಾಷೆ, ಲಿಂಗದ ಹೆಸರಿನಲ್ಲಿ ಬಿಟ್ಟು ಎಲ್ಲರೂ ಸಮಾನರಾಗಿ ಬೆಳೆವ ಭಾರತ ಅವರ ಕನಸು. ಇಂದಿನ ಯುವಕರು ವಿವೇಕಾನಂದರ ಈ ತತ್ವಗಳನ್ನು ಅಳವಡಿಸಿಕೊಂಡರೆ, ಅವರ ಕನಸಿನ ಭಾರತವನ್ನು ನಿಜವಾಗಿ ರೂಪಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ., ಮಾಜಿ ಸೈನಿಕ ಬೆಳ್ಳಾಲ ಗೋಪಿನಾಥ್ ರಾವ್, ಉಪನ್ಯಾಸಕರು ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಲೋಕೇಶನಾಥ್ ಬಿ. ವಂದಿಸಿದರು. ವಿದ್ಯಾರ್ಥಿನಿ ನವಿತಾ ಕಾರ್ಯಕ್ರಮ ನಿರೂಪಿಸಿದರು.