
ದಾನಗಳಲ್ಲಿ ರಕ್ತದಾನ ಶ್ರೇಷ್ಠದಾನ: ಮಮತಾ ಗಟ್ಟಿ
ಮಂಗಳೂರು: ಹಲವು ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನವಾಗಿದೆ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು, ರಕ್ತನಿಧಿ ವಿಭಾಗ ವೆನ್ ಲಾಕ್ ಆಸ್ಪತ್ರೆ ಮಂಗಳೂರು, ಕಲ್ಲೂರು ಎಜುಕೇಷನ್ ಟ್ರಸ್ಟ್ ಕಾರವಾರದ ಸಂಯುಕ್ತ ಆಶ್ರಯದಲ್ಲಿ ಯೂತ್ ರೆಡ್ ಕ್ರಾಸ್, ರೋವರ್ಸ್/ ರೇಂಜರ್ಸ್ ಘಟಕ, ಹಿರಿಯ ವಿದ್ಯಾರ್ಥಿ ಸಂಘ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಹಾಗೂ ಮಾಹಿತಿ ಶಿಬಿರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇಲ್ಲಿ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಜೀವ ಉಳಿಸಲು ರಕ್ತವನ್ನು ದಾನಿಗಳಿಂದ ಸಂಗ್ರಹಿಸಿ ತುರ್ತು ಸಂದರ್ಭದಲ್ಲಿ ಬಳಸಲಾಗುತ್ತದೆ. ಇಂತಹ ಶ್ರೇಷ್ಠವಾದ ರಕ್ತದಾನ ಶಿಬಿರ ಏರ್ಪಡಿಸಿದ ಎಲ್ಲರಿಗೂ ಮಮತಾ ಗಟ್ಟಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಕಲ್ಲೂರು ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲರಾದ ಸತೀಶ್ ಗಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ತದಾನದ ಬಗ್ಗೆ ವೆನ್ ಲಾಕ್ ಆಸ್ಪತ್ರೆ ಅಧಿಕಾರಿ ಆಂಟನಿ ಡಿಸೋಜಾ ಮಾಹಿತಿ ನೀಡಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ಒಟ್ಟು 45 ಮಂದಿ ರಕ್ತದಾನಿಗಳಾದರು. ರಕ್ತದಾನಿಗಳಿಗೆ ಕಲ್ಲೂರು ಟ್ರಸ್ಟ್ ವತಿಯಿಂದ ಟೀ ಶರ್ಟ್ ವಿತರಿಸಲಾಯಿತು.
ಕಾಲೇಜು ಪ್ರಾಂಶುಪಾಲಸತೀಶ್ ಗಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ,ಕಲ್ಲೂರು ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಕಲ್ಲೂರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ, ಅತಿಥಿಗಳಾಗಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶೆಷಪ್ಪ ಕೆ., ಯುವ ರೆಡ್ ಕ್ರಾಸ್ ಘಟಕದ ಹೈದರಾಲಿ, ಸಂಯೋಜಕರು ಆಂತರಿಕ ಗುಣಮಟ್ಟ ಕೋಶ ಇದರ ಸಂಯೋಜಕರಾದ ಕವಿತಾ ಎಂ ಎಲ್, ರೋವರ್ಸ್ ಘಟಕದ ಸಂಚಾಲಕರಾದ ಮಹಮ್ಮದ್ ರಫೀಕ್, ರೇಂಜರ್ಸ್ ಘಟಕದ ಸಂಚಾಲಕಿ ಅಕ್ಷತಾ ಸುವರ್ಣ, ಆರೋಗ್ಯ ಶಿಬಿರದ ಸಂಯೋಜಕರು ಕಲ್ಲೂರು ಎಜುಕೇಷನ್ ಟ್ರಸ್ಟ್ ನ ಟ್ರಸ್ಟಿ ಅಝೀಝ್ ಕಲ್ಲೂರು, ಮಾಧ್ಯಮ ವಿಭಾಗದ ಕಾರ್ಯದರ್ಶಿ ಉಮ್ಮರ್ ಸಾಲೆತ್ತೂರು ಉಪಸ್ಥಿತರಿದ್ದರು.