ಅಂಬ್ಲಮೊಗರು ಗ್ರಾಮದ ಪ್ರಮುಖ ರಸ್ತೆ ಕಡಿತ ಹಾಗೂ ಸರಕಾರಿ ಭೂಮಿ ಅತಿಕ್ರಮಣದ ವಿರುದ್ಧ ಧರಣಿ ಸತ್ಯಾಗ್ರಹ

ಅಂಬ್ಲಮೊಗರು ಗ್ರಾಮದ ಪ್ರಮುಖ ರಸ್ತೆ ಕಡಿತ ಹಾಗೂ ಸರಕಾರಿ ಭೂಮಿ ಅತಿಕ್ರಮಣದ ವಿರುದ್ಧ ಧರಣಿ ಸತ್ಯಾಗ್ರಹ


ಮಂಗಳೂರು: ಅಂಬ್ಲಮೊಗರು ಗ್ರಾಮದ ನೂರಾರು ಎಕರೆ ಭೂಮಿಗಳನ್ನು ನವಭೂಮಾಲಕರು  ವಶಪಡಿಸಿಕೊಳ್ಳುವುದರ ವಿರುದ್ಧ, ಪಂಚಾಯತ್ ನಿಂದ ನಿರ್ಮಿಸಲ್ಪಟ್ಟಿದ್ದ 1 ಕೋಟಿ 40 ಲಕ್ಷ ರೂ. ವೆಚ್ಚದ ಪ್ರಮುಖ ರಸ್ತೆಯನ್ನು ಕಡಿತ ಮಾಡಿರುವುದರ ವಿರುದ್ಧ ಹಾಗೂ ಸರಕಾರಿ ಭೂಮಿಗಳನ್ನು ಅತಿಕ್ರಮಿಸಿಕೊಂಡಿರುವುದನ್ನು ಖಂಡಿಸಿ ಅಂಬ್ಲಮೊಗರು ಗ್ರಾಮದ ಕೃಷಿ ಭೂಮಿ ಸಂರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ನಾಟೆಕಲ್ ನಲ್ಲಿರುವ ಉಳ್ಳಾಲ ತಾಲೂಕು ಕಚೇರಿಯೆದುರು ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು.


ಧರಣಿಯನ್ನು ಉದ್ಘಾಟಿಸಿ ಮಾತನಾಡಿದ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೋಟು ಅವರು, ಸರಕಾರಿ ಭೂಮಿ, ಆಸ್ತಿಪಾಸ್ತಿಗಳನ್ನು ರಕ್ಷಣೆ ಮಾಡಬೇಕಾದ ತಾಲೂಕು ಆಡಳಿತ ಇತರರಿಗೆ ಲೂಟಿಗೈಯ್ಯಲು ಅವಕಾಶ ನೀಡಿರುವುದು ಮಾಹಾಪರಾಧವಾಗಿದ್ದು, ತಹಸೀಲ್ದಾರ್ ಅವರ ಪಾತ್ರವನ್ನೇ ಪ್ರಶ್ನಿಸಬೇಕಾಗಿದೆ. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಹಲವಾರು ಬಾರಿ ಮನವಿಗಳನ್ನು ಅರ್ಪಿಸಿದರೂ ಯಾವುದೇ ಕ್ರಮಗಳನ್ನು ವಹಿಸದೆ ದಿವ್ಯ ಮೌನವಹಿಸಿರುವ ಪಂಚಾಯತ್ ಆಡಳಿತ ಹಾಗೂ ತಾಲೂಕು ಆಡಳಿತದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಮೂಲಕ ಕಾನೂನು ಸಮರಕ್ಕೆ ಸಜ್ಜಾಗಬೇಕಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


CPIM ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಕೃಷಿ ಭೂಮಿ ಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟವನ್ನು ತೀರಾ ನಗಣ್ಯವಾಗಿ ಕಾಣುತ್ತಿರುವ ಅಂಬ್ಲಮೊಗರು ಗ್ರಾಮ ಪಂಚಾಯತ್, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿಯನ್ನು ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಸ್ಥಳೀಯ ಗ್ರಾಮಸ್ಥರು ಭೂಮಿ ಕಳೆದುಕೊಂಡಿರುವುದು ಮಾತ್ರವಲ್ಲ ನಡೆದಾಡಲು ರಸ್ತೆಯಿಲ್ಲದೆ, ಕುಡಿಯಲು ನೀರಿಲ್ಲದೆ, ದಾರಿದೀಪವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಕೈವಶದಲ್ಲಿರುವ ಭೂಮಿಗಳ ಸುತ್ತ ಅತ್ಯಂತ ಎತ್ತರದ ತಡೆಗೋಡೆಯನ್ನು ನಿರ್ಮಿಸುವ ಮೂಲಕ ತಮ್ಮದೇ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡಿರುವ ನವಭೂಮಾಲಕರು ಸ್ಥಳೀಯರ ಭಾವನೆಗಳಿಗೆ ಎಳ್ಳಷ್ಟೂ ಗೌರವ ನೀಡದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ತೀರಾ ಖಂಡನೀಯ. ಇಂತಹ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಇನ್ನಷ್ಟು ಪ್ರಬಲ ಚಳುವಳಿ ರೂಪಿಸಲು ಜನತೆ ಸರ್ವ ಸನ್ನದ್ದರಾಗಬೇಕಾಗಿದೆ ಎಂದು ಹೇಳಿದರು.

ಧರಣಿಯನ್ನುದ್ದೇಶಿಸಿ CPIM ಜಿಲ್ಲಾ ನಾಯಕರಾದ ರಫೀಕ್ ಹರೇಕಳ, ಜಯಂತ ನಾಯಕ್ ಅವರು ಮಾತನಾಡಿ, ಜನಸಾಮಾನ್ಯರ ಸಂಕಷ್ಟಗಳಿಗೆ ಕಿವಿಕೊಡಬೇಕಾದ ತಾಲೂಕು ಆಡಳಿತ ಉಳ್ಳವರ ಹಿತಾಸಕ್ತಿಗಳನ್ನು ಕಾಪಾಡಲು ಹೆಚ್ಚು ಉತ್ಸುಕತೆಯನ್ನು ತೋರಿಸುತ್ತಿದೆ. ಉಳ್ಳಾಲ ತಾಲೂಕಿನಲ್ಲಿ ಜನತೆಯ ಬವಣೆಗಳನ್ನು ಕೇಳುವವರೇ ಇಲ್ಲವಾಗಿದೆ ಎಂದು ಟೀಕಿಸಿದರು.

ಧರಣಿನಿರತ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ತಹಶೀಲ್ದಾರ್ ರವರು ಕಡಿತ ಮಾಡಿದ ಪ್ರಮುಖ ರಸ್ತೆಯ ಕಾರ್ಯವನ್ನು ಕೂಡಲೇ ನಿಲ್ಲಿಸುವುದಾಗಿಯೂ ಹಾಗೂ ಮೇ 30 ರಂದು ತಮ್ಮ ಸಮಕ್ಷಮದಲ್ಲಿ ಸಮಾಲೋಚನಾ ಸಭೆಯನ್ನು ಕರೆಯುವುದಾಗಿಯೂ ಭರವಸೆಯನ್ನು ನೀಡಿದರು.

ಧರಣಿ ಸತ್ಯಾಗ್ರಹದಲ್ಲಿ CPIM ಜಿಲ್ಲಾ ನಾಯಕರಾದ ಶೇಖರ್ ಕುಂದರ್,ಸುಂದರ ಕುಂಪಲ  DYFI ಜಿಲ್ಲಾ ಮುಖಂಡರಾದ ರಿಜ್ವಾನ್ ಹರೇಕಳ, ರಜಾಕ್ ಮೊಂಟೆಪದವು, ರಜಾಕ್ ಮುಡಿಪು, ಸಾಮಾಜಿಕ ಹೋರಾಟಗಾರರಾದ ಅಬೂಬಕ್ಕರ್ ಜೆಲ್ಲಿಯವರು ಭಾಗವಹಿಸಿದ್ದರು

ಹೋರಾಟದ ನೇತೃತ್ವವನ್ನು ಅಂಬ್ಲಮೊಗರು ಗ್ರಾಮದ ಕೃಷಿ ಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ಮುಖಂಡರಾದ ಇಬ್ರಾಹಿಂ ಮದಕ, ಸುಂದರ ಅಂಬ್ಲಮೊಗರು, ಶಾಲಿನಿ ಪೂಜಾರಿ, ಕಮರುನ್ನೀಸಾ, ಯಶೋಧಾ, ಭಾರತಿ, ಪುಷ್ಪಾ, ಜಮೀಲಾ, ರಫೀಕ್, ಉಮೇಶ್, ನಾಗೇಶ್ ಮತ್ತಿತರರು ವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article