
ಉಳ್ಳಾಲ ತಾಲೂಕಿನಲ್ಲಿ ಮಳೆಗೆ ವಿವಿಧೆಡೆ ಗುಡ್ಡ ಗುಸಿದು ಪ್ರಾಣ ಹಾನಿ: ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸ್ಪೀಕರ್ ಸೂಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ಉಳ್ಳಾಲ ತಾಲೂಕಿನ ವಿವಿಧೆಡೆ ಗುಡ್ಡ ಕುಸಿತದಿಂದಾಗಿ ಪ್ರಾಣ ಹಾನಿ ಸಂಭವಿಸಿದ್ದು, ಮದೀನದಿಂದ ಮಾಹಿತಿ ಪಡೆದಿರುವ ಸಭಾಧ್ಯಕ್ಷ ಯು.ಟಿ. ಖಾದರ್, ಮುಂಜಾಗೃತಾ ಹಾಗೂ ರಕ್ಷಣಾ ಕಾರ್ಯಾಚರಣೆಗಾಗಿ ಅಗತ್ಯ ಕ್ರಮ ಕೈ ಗೊಳ್ಳಲು ಜಿಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಉಳ್ಳಾಲ ತಾಲೂಕಿನ ಬೆಳ್ಮ ಹಾಗೂ ಮಂಜನಾಡಿ ಗ್ರಾಮದಲ್ಲಿ ಗುಡ್ಡ ಕುಸಿದು ಪ್ರಾಣ ಹಾನಿ ಸಂಭವಿಸಿದ್ದು ಹಾಗೂ ಉಳ್ಳಾಲ ನಗರಸಭೆ ವ್ಯಾಪ್ತಿಯ ಉಳ್ಳಾಲ ಬೈಲು, ಅಕ್ಕರೆಕೆರೆ, ಮಿಲ್ಲತ್ ನಗರ, ಉಳಿಯ, ಅಲೇಕಳ, ಸುಂದರಿಬಾಗ್, ಕಲ್ಲಾಪು ಸೋಮೇಶ್ವವರ ಕೋಟೆಕಾರು ವ್ಯಾಪ್ತಿಯ ಕುಂಪಲ, ಕನೀರ್ ತೋಟ, ಉಚ್ಚಿಲ ಮುಂತಾದ ನದಿ ತಗ್ಗು ಪ್ರದೇಶಗಳಿಗೆ ಕೃತಕ ನೆರೆಯಿಂದ ಮನೆಗಳಿಗೆ ನೀರು ನುಗ್ಗಿ ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟಾಗಿದ್ದು, ಮುಂಜಾಗ್ರತಾ ಕ್ರಮ ಹಾಗೂ ಅಗತ್ಯ ರಕ್ಷಣಾ ಕಾರ್ಯದ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, NDRF ಮುಂತಾದ ರಕ್ಷಣಾ ತಂಡಗಳನ್ನು ಸನ್ನದ್ಧಗೊಳಿಸಲು ಸೂಚನೆ ನೀಡಿದ್ದೇನೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರ ಜೊತೆಯಲ್ಲಿ ಕೂಡಾ ಮಾತುಕತೆ ನಡೆಸಿ ಮುಖ್ಯಮಂತ್ರಿಗಳ ಗಮನಕ್ಕೂ ಕೂಡಾ ತರಲಾಗಿದ್ದು ಮೃತರ ಕುಟುಂಬಗಳಿಗೆ ಪರಿಹಾರ ಹಾಗೂ ಆಸ್ತಿ ಪಾಸ್ತಿ ನಷ್ಟ ಸಂಭವಿಸಿದರ ವರದಿ ಆಧರಿಸಿ ಪರಿಹಾರ ನೀಡಿ ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಅಧಿಕಾರಿಯನ್ನು ನೇಮಿಸಿ ಪರಿಸ್ಥಿತಿಯ ಅವಲೋಕನ ನಡೆಸಲು ಸೂಚನೆ ನೀಡಲಾಗಿದೆಯೆಂದು ಯು.ಟಿ. ಖಾದರ್ ತಿಳಿಸಿದ್ದಾರೆ.
ಕ್ಷೇತ್ರದ ಪ್ರತೀ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವ ಯು.ಟಿ. ಖಾದರ್ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಂಡು ರಕ್ಷಣಾ ಕಾರ್ಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ತಾಲೂಕಿನ ಬೆಳ್ಮ ಗ್ರಾಮದ ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡೆ, ತಡೆಗೋಡೆ ಕುಸಿದು ಬಿದ್ದು ನೌಶಾದ್ ರ ಪುತ್ರಿ ಫಾತಿಮ ನಈಮ (10), ಮಂಜನಾಡಿ ಗ್ರಾಮದ ಮೊಂಟೆ ಪದವು ಸಮೀಪದ ಕೋಡಿ ಎಂಬಲ್ಲಿ ಗುಡ್ಡ ಜರಿದು ಐವರು ಮಣ್ಣಿನಡಿಯಲ್ಲಿ ಸಿಲುಕಿ ಪ್ರೇಮ ಪೂಜಾರಿ ಅವರು ಮೃತರಾಗಿದ್ದು, ಇತರರ ರಕ್ಷಣಾ ಕಾರ್ಯ ಮುಂದುವರಿದಿದೆ. ಸ್ಥಳದಲ್ಲಿ ಅಪರ ಜಿಲ್ಲಾಧಿಕಾರಿ ತಹಶೀಲ್ದಾರು ಹಾಗೂ ಇತರ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ, ಸಾರ್ವಜನಿಕರ ಸಂಪರ್ಕದಲ್ಲಿದ್ದುಕೊಂಡು ಸಹಕರಿಸುವಂತೆ ಸಭಾಧ್ಯಕ್ಷರು ಸೂಚನೆ ನೀಡಿದ್ದು, ಜನ ಸಾಮಾನ್ಯರೂ ಕೂಡಾ ಎಚ್ಚರಿಕೆ ವಹಿಸುವಂತೆ ಸಭಾಧ್ಯಕ್ಷರು ಮನವಿ ಮಾಡಿದ್ದಾರೆ.