ಮೊಂಟೆಪದವು ಗುಡ್ಡ ಕುಸಿತ ಪ್ರಕರಣ: ಮೃತರ ಸಂಖ್ಯೆ 2ಕ್ಕೆ ಏರಿಕೆ

ಮೊಂಟೆಪದವು ಗುಡ್ಡ ಕುಸಿತ ಪ್ರಕರಣ: ಮೃತರ ಸಂಖ್ಯೆ 2ಕ್ಕೆ ಏರಿಕೆ


ಮಂಗಳೂರು: ಮಂಜನಾಡಿ ಗ್ರಾಮದ ಮೊಂಟೆಪದವು ಹಿತ್ತಿಲುಕೋಡಿ ಕೊಪ್ಪಲ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಮನೆ ಮಾಲಕ ಕಾಂತಪ್ಪ ಪೂಜಾರಿಯವರ ಸೊಸೆ ಅಶ್ವಿನಿ ಮತ್ತು ಇಬ್ಬರು ಮೊಮ್ಮಕ್ಕಳ ಪೈಕಿ ಒಂದು ಮಗು ಮೃತಪಟ್ಟಿದೆ.

ಈ ಬಗ್ಗೆ ರಕ್ಷಣಾ ತಂಡದ ಭಾಗವಾಗಿರುವ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯ ಡಾ. ವಿಕ್ರಂ ಶೆಟ್ಟಿ ಮಾಹಿತಿ ನೀಡಿದ್ದು, ಒಂದು ಮಗು ಮೃತಪಟ್ಟಿದೆ. ಅವಶೇಷಗಳಡಿ ಸಿಲುಕಿರುವ ಇನ್ನೊಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳ ತಾಯಿ ಅಶ್ವಿನಿ ಉಸಿರಾಡುತ್ತಿದ್ದು, ಕೈಗಳನ್ನು ಅಲ್ಲಾಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮೃತಪಟ್ಟಿರುವ ಮಗುವನ್ನು ಅವಶೇಷಗಳಡಿಯಿಂದ ರಕ್ಷಣಾ ತಂಡ ಹೊರತೆಗೆದಿದೆ. ತಾಯಿ ಮತ್ತು ಇನ್ನೊಂದು ಮಗುವಿನ ರಕ್ಷಣಾ ಕಾರ್ಯ ಮುಂದುವರಿದಿದೆ.

ಶುಕ್ರವಾರ ಮುಂಜಾನೆ ನಾಲ್ಕು ಗಂಟೆಗೆ ಸುಮಾರಿಗೆ ಸಂಭವಿಸಿದ ಈ ದುರಂತದಲ್ಲಿ ಕಾಂತಪ್ಪ ಪೂಜಾರಿಯವರ ಪತ್ನಿ ಪ್ರೇಮಾ (58) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಸಿದ ಮನೆಯೊಳಗೆ ಸಿಲುಕಿದ್ದ ಕಾಂತಪ್ಪ ಪೂಜಾರಿ ಹಾಗೂ ಅವರ ಪುತ್ರ ಸೀತಾರಾಮರನ್ನು ರಕ್ಷಿಸಲಾಗಿದೆ. ಕಾಂತಪ್ಪರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೀತಾರಾಮರ ಪತ್ನಿ ಅಶ್ವಿನಿ ಹಾಗೂ 3 ಹಾಗೂ 2 ವರ್ಷದ ಇಬ್ಬರು ಮಕ್ಕಳು ಕುಸಿದ ಮಣ್ಣು ಮತ್ತು ಮನೆಯ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಪೈಕಿ ಒಂದು ಮಗು ಸಾವನ್ನಪ್ಪಿದ್ದರೆ, ತಾಯಿ ಹಾಗೂ ಇನ್ನೊಂದು ಜೀವನ್ಮರಣ ಹೋರಾಟ ನಡೆಸುತ್ತಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ವೈದ್ಯರ ತಂಡವು ಅವರಿಗೆ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article