
ಉಡುಪಿ ಜಿಲ್ಲಾ ನೂತನ ಎಸ್ಪಿಯಾಗಿ ಹರಿರಾಮ್ ಶಂಕರ್ ಅಧಿಕಾರ ಸ್ವೀಕಾರ
ಉಡುಪಿ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹರಿರಾಮ್ ಶಂಕರ್ ಶುಕ್ರವಾರ ಬೆಳಗ್ಗೆ ನಿರ್ಗಮನ ಎಸ್ಪಿ ಡಾ. ಅರುಣ್ ಕೆ. ಅವರಿಂದ ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನತೆ ಯಾವುದೇ ರೀತಿಯಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯಾಗಲು ಅವಕಾಶ ನೀಡಬಾರದು. ಅಂತಹ ಯಾವುದೇ ಘಟನೆಗಳು ಸಂಭವಿಸದಿರಲು ಪೊಲೀಸರೊಂದಿಗೆ ಕೈಜೋಡಿಸಬೇಕು. ಆ ತರಹದ ಮಾಹಿತಿ ಇದ್ದರೆ ತಕ್ಷಣ ಮಾಹಿತಿ ನೀಡಿ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳ ಬಗ್ಗೆ ಸಿಕ್ಕರೂ ತಕ್ಷಣ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳಿ ಎಂದು ವಿನಂತಿಸಿದ್ದಾರೆ.
ಕಳೆದ ಸುಮಾರು 20 ತಿಂಗಳಿನಿಂದ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ರ್ಯನಿರ್ವಹಿಸುತಿದ್ದ ಡಾ.ಅರುಣ್ ಕೆ. ಅವರನ್ನು ಕನ್ನಡ ಜಿಲ್ಲೆಯ ಎಸ್ಪಿಯಾಗಿ ರಾಜ್ಯ ಸರಕಾರ ವರ್ಗಾವಣೆ ಮಾಡಿದೆ. ತೆರವಾದ ಸ್ಥಾನಕ್ಕೆ ಪೊಲೀಸ್ ಇಂಟಲಿಜೆನ್ಸ್ ವಿಭಾಗದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಹರಿರಾಮ್ ಶಂಕರ್ ರನ್ನು ನಿಯುಕ್ತಿ ಗೊಳಿಸಿ ಸರಕಾರ ಗುರುವಾರ ಆದೇಶಿಸಿತ್ತು. ಅದರಂತೆ ಅವರಿಂದು ಅಧಿಕಾರ ಸ್ವೀಕರಿಸಿದ್ದಾರೆ.
ಕೇರಳದ ತ್ರಿಶೂರ್‌ನ ಹರಿರಾಮ್ ಶಂಕರ್, ಕಲ್ಲಿಕೋಟೆ ಎನ್‌ಐಟಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2016ರಲ್ಲಿ ತಮ್ಮ ಐದನೇ ಪ್ರಯತ್ನದಲ್ಲಿ ಅವರು ಯುಪಿಎಸ್ಸಿಯಲ್ಲಿ 145ನೇ ರ್ಯಾಂಕ್ ಪಡೆದು ತಾವು ಬಯಸಿದ ಐಪಿಎಸ್ ಹುದ್ದೆಗೆ ಆಯ್ಕೆಯಾಗಿದ್ದರು.
ಹರಿರಾಮ್ ಶಂಕರ್ ಅವರು ಬೆಳಗಾವಿ, ಕುಂದಾಪುರ ಉಪವಿಭಾಗದ ಎಸಿಪಿ, ಮಂಗಳೂರಿನಲ್ಲಿ ಡಿಸಿಪಿ, ಹಾಸನದಲ್ಲಿ ಎಸ್ಪಿಯಾಗಿಯೂ ಕಾರ್ಯನಿರ್ವಹಿಸಿದ್ದರು.