
ಅಬ್ದುಲ್ ರಹ್ಮಾನ್ ಕುಟುಂಬಕ್ಕೆ ಕೋಟಿ ಪರಿಹಾರಕ್ಕೆ ಒತ್ತಾಯ
ಮಂಗಳೂರು: ಮುಸ್ಲಿಂ ಯುವಕ ಕೊಳ್ತಮಜಲಿನ ಅಬ್ದುಲ್ ರಹ್ಮಾನ್ ಕುಟುಂಬಕ್ಕೆ ಸರಕಾರ ಕೂಡಲೇ 1 ಕೋಟಿ ರೂ. ಪರಿಹಾರ ಘೋಷಿಸಿಸಬೇಕು ಎಂದು ಮುಸ್ಲಿಮ್ ಸಮಾಜ ಬಂಟ್ವಾಳ ಆಗ್ರಹಿಸಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಸಮಾಜ ಬಂಟ್ವಾಳ ಇದರ ಅಧ್ಯಕ್ಷ ಕೆ.ಎಚ್. ಅಬೂಬಕ್ಕರ್ ಅವರು ಮಾತನಾಡಿ, ಅಬ್ದುಲ್ ರಹಿಮಾನ್ ಅವರ ಹತ್ಯೆಯ ಬಳಿಕ ಪತ್ನಿ, ಎರಡು ಮಕ್ಕಳು, ತಂದೆ ತಾಯಿಯನ್ನು ಹೊಂದಿರುವ ಅವರ ಕುಟುಂಬ ಇದೀಗ ನಿರ್ಗತಿಕವಾಗಿದೆ. ಅವರಿಗೆ ಬೇಕಾದ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಎಂದರು.
ಹಲ್ಲೆಗೊಳಗಾದ ಕಲಂದರ್ ಶಾಫಿಯವರ ಚಿಕಿತ್ಸೆಯ ವೆಚ್ಚವನ್ನು ಸರಕಾರ ಭರಿಸಬೇಕೆಂದು ಮತ್ತು ಪರಿಹಾರ ಕೂಡ ನೀಡಬೇಕೆಂದು ಆಗ್ರಹಿಸಿದರು.
ಕೊಲೆ ಮತ್ತು ಕೊಲೆ ಯತ್ನದ ಹಿಂದೆ ಇನ್ನೂ ಕೂಡ ಕಾಣದ ಕೈಗಳು ಇವೆ. ಅವರನ್ನು ಕೂಡಾ ಕಂಡು ಹಿಡಿದು ಕೂಡಲೇ ಬಂಧಿಸಬೇಕು. ಅಬ್ದುಲ್ ರಹಿಮಾನ್ ಹತ್ಯೆಯನ್ನು ಎನ್‌ಐಎ ಅಥವಾ ಎಸ್‌ಐಟಿ ನಂತಹ ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು. ಕಳೆದ ಒಂದು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಎಲ್ಲಾ ಗಲಭೆಗಳಿಗೆ, ಹತ್ಯೆಗಳಿಗೂ ಜಿಲ್ಲಾಡಳಿತ ಮತ್ತು ಸಂಘ ಪರಿವಾರವೇ ಹೊಣೆ. ಅದುದರಿಂದ ಸರಕಾರ ಇವರ ಮೇಲೆ ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಸಮಾಜದ ಮುಂದೆ ಸತ್ಯವನ್ನು ಹೊರತರಬೇಕು ಎಂದು ಈ ಮೂಲಕ ಮುಸ್ಲಿಮ್ ಸಮಾಜ ಅಗ್ರಹಿಸುತ್ತದೆ ಎಂದರು.
ಮುಸ್ಲಿಂ ಸಮಾಜದ ಪ್ರಧಾನ ಕಾರ್ಯದರ್ಶಿ ಹನೀಫ್ ಖಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶಾಹುಲ್ ಎಸ್.ಎಚ್., ಇಕ್ಬಾಲ್ ಐಎಂಆರ್, ಮುಸ್ತಾಕ್ ತಲಪಾಡಿ, ಹಸನ್ ಸುಲೈಮಾನ್ ಉಪಸ್ಥಿತರಿದ್ದರು.