
ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಹೆತ್ತವರ ಪಾತ್ರ ಬಹಳ ಮುಖ್ಯ: ಪ್ರೊ. ನರೇಂದ್ರ ಎಲ್. ನಾಯಕ್
ಮಂಗಳೂರು: ಪದವಿ ಪೂರ್ವ ಹಂತದಲ್ಲಿ ವಿದ್ಯಾರ್ಥಿಗಳ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಿಕೊಳ್ಳುವ ಮೂಲಕ ಹೆತ್ತವರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು ಎಕ್ಸ್‌ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಹೇಳಿದರು.
ಅವರು ನಗರದ ಶ್ರೀ ಭಗವತಿ ಕ್ಷೇತ್ರದ ಕೂಟಕ್ಕಳ ಸಭಾಂಗಣದಲ್ಲಿ ನಡೆದ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮತ್ತು ಅವರ ಹೆತ್ತವರಿಗೆ ಆಯೋಜಿಸಿದ ಓರಿಯೆಂಟೇಶನ್-2025 ಶೈಕ್ಷಣಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಭ್ಯಾಸದಲ್ಲಿ ಸಮಯವು ಅತ್ಯಮೂಲ್ಯವಾದದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿಒಂದು ಗುರಿಯನ್ನು ಹೊಂದಿರಬೇಕು ಹಾಗೂ ಗುರಿ ಸಾಧಿಸುವಲ್ಲಿ ನಿರಂತರ ಪ್ರಯತ್ನ ಇರಬೇಕು. ಕಠಿಣ ಪರಿಶ್ರಮ, ಸಮಯದ ಸದುಪಯೋಗ ಮತ್ತು ಶಿಸ್ತಿನಿಂದ ಯಶಸ್ಸು ಸಾಧ್ಯ. ಸರಿಯಾದ ಯೋಚನೆ, ಯೋಜನೆ ಹಾಗೂ ಛಲದೊಂದಿಗೆ ಮುನ್ನಡೆದರೆ ಸಾಧನೆಯ ಪಥ ಮುಟ್ಟಲು ಸಾಧ್ಯ. ಸಾಧನೆಗೆ ಯಾವುದೇ ಅಡ್ಡದಾರಿ ಇಲ್ಲ. ವಿದ್ಯಾರ್ಥಿಯು ಶಿಕ್ಷಣವನ್ನು ಅಧ್ಯಯನ ಮಾಡುವಾಗ ಪ್ರತಿ ನಿಮಿಷವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕು, ಕಲಿಕೆಯನ್ನು ಹೊರೆ ಎಂದು ಭಾವಿಸದೆ ಸಂತೋಷದಿಂದ ಅಭ್ಯಾಸ ಮಾಡಬೇಕು. ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ನಮ್ಮ ಪರಿಪೂರ್ಣವಾದ ಪರಿಶ್ರಮ ತುಂಬಾ ಮುಖ್ಯ ಎಂದು ಹೇಳಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಸಮರ್ಪಣಾ ಮನೋಭಾವ, ಶಿಸ್ತು ಹಾಗೂ ಸಮಯವನ್ನು ಗೌರವಿಸಿದರೆ ಉನ್ನತ ಸಾಧನೆಯನ್ನು ಮಾಡಬಹುದು. ಪದವಿ ಪೂರ್ವ ಹಂತವು ವಿದ್ಯಾರ್ಥಿಗಳ ಪಾಲಿಗೆ ಇದು ಬಹುಮುಖ್ಯ. ಕಠಿಣ ಪರಿಶ್ರಮ ಮತ್ತು ಗುರಿ ಮುಟ್ಟುವ ಛಲದೊಂದಿಗೆ ಮುನ್ನಡೆದರೆ ಸಾಧನೆಯ ಪಥ ಮುಟ್ಟಲು ಸಾಧ್ಯ. ಮಕ್ಕಳ ಭವಿಷ್ಯಕ್ಕಾಗಿ ಹೆತ್ತವರು ಮತ್ತು ಪಾಲಕರು ಕೆಲವೊಂದು ವಿಚಾರದಲ್ಲಿ ತ್ಯಾಗ ಮಾಡಬೇಕು. ವಿದ್ಯಾರ್ಥಿಗಳ ಮುಂದಿನ ಗುರಿ ತಲುಪುವಲ್ಲಿ ಪೋಷಕರು ಜವಾಬ್ದಾರಿ ಹೊಂದಿರುತ್ತಾರೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು.
2024-25ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ 600 ರಲ್ಲಿ 599 ಅಂಕವನ್ನು ಗಳಿಸಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಹಾಗೂ ಅವಳ ಪೋಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್. ಎನ್. ನಾಯಕ್ ಮಾತನಾಡಿ, ಶೈಕ್ಷಣಿಕ ಹಂತದಲ್ಲಿ ತಂತ್ರಜ್ಞಾನವನ್ನು ಸಮರ್ಪಕ ಬಳಕೆ ಮಾಡಬೇಕು. ವಿದ್ಯಾರ್ಥಿಗಳು ಇತ್ತೀಚೆಗೆ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಸಮಯವನ್ನು ವ್ಯರ್ಥ ಮಾಡುವುದರ ಬದಲು ಶೈಕ್ಷಣಿಕವಾಗಿ ಭವಿಷ್ಯಕ್ಕೆ ಪೂರಕವಾಗುವಂತೆ ಮಾಹಿತಿ-ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಕಾಲೇಜಿನ ಸೌಲಭ್ಯಗಳು ಮತ್ತು ನಿಯಮಾವಳಿಗಳ ಬಗ್ಗೆ ವಿವರಿಸಿದರು.
ಎ.ಐ.ಸಿ.ಇ. ವಿಭಾಗದ ಸಂಯೋಜಕರಾದ ಪ್ರೊ.ಶ್ಯಾಮ್‌ಪ್ರಸಾದ್ ಅವರು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ ಕುರಿತು, ಕಾಲೇಜಿನಲ್ಲಿ ಲಭ್ಯವಿರುವ ವಿವಿಧ ಕೋರ್ಸ್‌ಗಳ
ಕುರಿತು ಮತ್ತು ಅವುಗಳಿಂದ ಭವಿಷ್ಯದ ಅವಕಾಶಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ವಾಸ್ತುಶಿಲ್ಪ ತಜ್ಞೆ ದೀಪಿಕಾ ಎ. ನಾಯಕ್, ಶೈಕ್ಷಣಿಕ ಸಮಿತಿಯ ಸದಸ್ಯ ಪ್ರೊ. ಬಿ. ವಿನಯ್ ಕುಮಾರ್, ಕಾರ್ಯಕ್ರಮದ ಸಂಯೋಜಕಿ ರಾಧಿಕಾ ಭಟ್ ಉಪಸ್ಥಿತರಿದ್ದರು.
ಜೀವಶಾಸ್ತ್ರವಿಭಾಗದ ಉಪನ್ಯಾಸಕಿ ಉಜ್ವಲ್‌ಪ್ರದೀಪ್‌ರವರು ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಝೀಟಾ ಡಿಸೋಜ ವಂದಿಸಿದರು.