
ಮೇ 10ರಂದು ಹರಿಕೃಷ್ಣ ಪುನರೂರು ಕಮ೯ಯೋಗಿ ಬಿರುದು ಪ್ರದಾನ
Wednesday, May 7, 2025
ಮೂಡುಬಿದಿರೆ: ಸಾಹಿತ್ಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹರಿಕೃಷ್ಣ ಪುನರೂರು ಅವರಿಗೆ ಅಭಿವಂದನ ಮತ್ತು ಕರ್ಮಯೋಗಿ ಬಿರುದು ಪ್ರದಾನ ಸಮಾರಂಭವು ಮೇ 10ರಂದು ಸಂಜೆ 4 ಗಂಟೆಗೆ ಮಂಗಳೂರಿನ ಪಿಲಿಕುಳದ ಭಾರತ್ ಸೈಟ್ಸ್ ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿದೆ ಎಂದು ಪುನರೂರು ಅಭಿವಂದನಾ ಸಮಿತಿ ಗೌರವ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಸಂಜೆ 4 ಗಂಟೆಗೆ ಸಂಪಿಗೆ ಲೋಕೇಶ್ ಅವರಿಂದ ಸುರ್ ಸಾಗರ್ ಪ್ಯೂಷನ್ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ. 4.40ಕ್ಕೆ ಪುನರೂರು ಅವರ ಸಾಕ್ಷ್ಯಚಿತ್ರ ಪ್ರದರ್ಶನ, ಬಳಿಕ ಮೆರವಣಿಗೆ ನಡೆಯಲಿದೆ. ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ವಿ.ವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಸಾಹಿತಿ ಕಬ್ಬಿನಾಲೆ ವಸಂತ ಭಾರಧ್ವಾಜ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪುನರೂರು ಅಭಿವಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್, ಸಮಿತಿ ಪ್ರಮುಖರಾದ ಭುವನಾಭಿರಾಮ ಉಡುಪ, ಜಿ.ಕೆ. ಭಟ್ ಸೇರಾಜೆ, ಶ್ರೀಪತಿ ಭಟ್, ಮಂಜುನಾಥ ಎಸ್. ರೇವಣ್ಯರ್ ಭಾಗವಹಿಸಿದ್ದರು.