
ಪಹಲ್ಗಾಮ್ ಹತ್ಯ ಘಟನೆ-ಒಂದು ವಾರದೊಳಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ: ಚಕ್ರವರ್ತಿ ಸೂಲಿಬೆಲೆ
ಮೂಡುಬಿದಿರೆ: ಪ್ರಭಾವಿಯಾಗಿರುವ ಈಶ್ವರ ಸೈಲೆಂಟ್ ವ್ವಕ್ತಿತ್ವವನ್ನು ಹೊಂದಿರುವವ ಆದರೆ ಯಾವಾಗೆಲ್ಲಾ ಎದ್ದು ನಿಲ್ತಾನೊ ಆವಾಗ ತ್ರಿಶೂಲ ಹಿಡಿದು ತಾಂಡವ ನೃತ್ಯವನ್ನೆ ಮಾಡ್ತಾನೆ. ಭಾರತದ ತಾಂಡವ ನೃತ್ಯ ಕೆಲವೇ ದಿನಗಳಲ್ಲಿ ಆರಂಭವಾಗುವ ಮೂಲಕ ಪಹಲ್ಗಾಮ್ ಘಟನೆಗೆ ಪ್ರತಿಕಾರವಾಗಿ ಭಾರತ ದೇಶ ಒಂದು ವಾರದೊಳಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲಿದೆ ಎಂಬ ವಿಶ್ವಾಸ ನಮಗಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ದರೆಗುಡ್ಡೆ ಇಟಲ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಭಯೋತ್ಪಾದಕರು ಹಿಂದೂ ಪ್ರವಾಸಿಗರ ಜಾತಿ ಕೇಳಿ, ಪ್ಯಾಂಟ್ ಬಿಚ್ಚಿಸಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಂತ್ರಸ್ಥರಿಗೆ ಪ್ರಧಾನಿಯವರಿಂದ ಕೇವಲ ಸಾಂತ್ವನ ಸಾಲದು. ಪ್ರಧಾನಿಯಷ್ಟೆ ಸಾಮಾನ್ಯ ಜನರ ಜೀವಕ್ಕೂ ಬೆಲೆ ಇದೆ. ಆದ್ದರಿಂದ ಪಹಲ್ಗಾಮ್ ಘಟನೆಗೆ ಪಾಕಿಸ್ತಾನದ ವಿರುದ್ಧ ಪ್ರತಿಕಾರ ತೀರಿಸುವುದೆ ಸೂಕ್ತ ಪರಿಹಾರ ಎಂದರು.
ಹಿಂದೂಗಳ ಒಗ್ಗಟ್ಟನ್ನು ಮುರಿಯಲು ರಾಜಕಾರಣಿಗಳು ಜಾತಿ ಸೃಷ್ಟಿ ಮಾಡಿದ್ದಾರೆ. ದೇಶದ ಹಿತಾಸಕ್ತಿಗೆ, ಧರ್ಮದ ರಕ್ಷಣೆಗೆ ಹಿಂದೂಗಳು ತಮ್ಮಲ್ಲಿರುವ ಆ ಜಾತಿ, ಈ ಜಾತಿ ಎಂಬ ಜಾತಿಗೋಡೆಯನ್ನು ಕಳಚಿ ಈಚೆ ಬಂದು ನಾವೆಲ್ಲಾ ಒಂದು ಎಂಬ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಪೂಜಾರಿ ಅಧ್ಯಕ್ಷತೆ ವಹಿಸಿದರು.
ಅಳದಂಗಡಿ ಅರಮನೆಯ ಪದ್ಮಪ್ರಸಾದ್ ಅಜಿಲರು, ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುವಾಗ ಅದರ ಹಿಂದೆ ಧಾರ್ಮಿಕ ಪರಂಪರೆ ಇರುವುದನ್ನು ನಾವು ಕಾಣಬಹುದು ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಖೇಶ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ತಿಮ್ಮಯ ಶೆಟ್ಟಿ, ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ, ಮರೋಡಿ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್, ಕೆಎಂಎಫ್ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ವಕೀಲರಾದ ಮಯೂರ ಕೀರ್ತಿ, ಎಂಸಿಎಸ್ ಸೊಸೈಟಿ ಅಧ್ಯಕ್ಷ ಚಂದ್ರಶೇಖರ ರಾವ್, ಡಾ.ಅಮರಶ್ರೀ ಶೆಟ್ಟಿ, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಮಿತಿ ಕಾರ್ಯದರ್ಶಿ ವಿಶ್ವನಾಥ ಕೋಟ್ಯಾನ್ ಸ್ವಾಗತಿಸಿದರು.