
ದರೋಡೆಗೆ ಸಂಚು: ಇಬ್ಬರ ಬಂಧನ
ಮೂಡುಬಿದಿರೆ: ದರೋಡೆ ಮಾಡಲು ಸಂಚು ರೂಪಿಸಿದ್ದ ಐವರ ಗುಂಪಲ್ಲಿ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಗುರುವಾರ ರಾತ್ರಿ ಬಡಗ ಮಿಜಾರಿನ ಬೆಳ್ಳೆಚ್ಚಾರಿನಲ್ಲಿ ಬಂಧಿಸಿದ್ದಾರೆ.
ಮೂಡುಬಿದಿರೆ ಮಾರ್ಪಾಡಿ ಗ್ರಾಮ ಸುಭಾಸ್ ನಗರದ ಜಗದೀಶ (29), ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಅಂಗರಕರಿಯ ನಿವಾಸಿ ಪ್ರಶಾಂತ್(27) ಬಂಧಿತ ಆರೋಪಿಗಳು.
ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕಿ ಪ್ರತಿಭಾ ಕೆ.ಸಿ ಹಾಗೂ ಪೊಲೀಸ್ ಸಿಬ್ಬಂದಿಗಳು ವಿದ್ಯಾಗಿರಿಲ್ಲಿ ರೌಂಡ್ಸ್ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಕ್ಕಿದ ಖಚಿತ ಮಾಹಿತಿಯನ್ನು ಆಧಾರಿಸಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ಮೊದಲು ಮರೆಯಲ್ಲಿ ನಿಂತು ಪೊಲೀಸರು ಆರೋಪಿಗಳ ಚಲನವಲನಗಳನ್ನು ಗಮನಿಸಿದ್ದಾರೆ. ದಾಳಿ ನಡೆಸುವ ಸಂದರ್ಭ ಐದು ಜನರಲ್ಲಿ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಇನ್ನೋವಾ ಕಾರಿನಲ್ಲಿ ಕಬ್ಬಿಣದ ತಲವಾರ್, ಖಾರದ ಪುಡಿ ಪ್ಯಾಕೇಟನ್ನು ಇರಿಸಿಕೊಂಡು ದಾರಿಯಲ್ಲಿ ಹಾದು ಹೋಗುವ ಜನರನ್ನು ದರೋಡೆ ಮಾಡುವ ಉದ್ದೇಶದಿಂದ ಹಾಗೂ ರಾತ್ರಿ ಸಮಯ ದ್ವಿ-ಚಕ್ರ ವಾಹನದಲ್ಲಿ ಓಡಾಡುವ ಜನರನ್ನು ನಿಲ್ಲಿಸಿ ಅವರಿಗೆ ಕಬ್ಬಿಣದ ತಲವಾರ್ ಅನ್ನು ತೋರಿಸಿ ಹೆದರಿಸಿ, ಕಣ್ಣಿಗೆ ಖಾರದ ಪುಡಿಯನ್ನು ಹಾಕಿ ಅವರಲ್ಲಿರುವ ಹಣ ಹಾಗೂ ಸೊತ್ತುಗಳನ್ನು ಬಲವಂತವಾಗಿ ದೋಚುವ ಉದ್ದೇಶದಿಂದ ಬಂದು ಸೇರಿ ಈ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಕಾರನ್ನು ಪರಿಶೀಲಿಸಿದಾಗ ಕಾರಿನ ಡಿಕ್ಕಿಯಲ್ಲಿ ಕಬ್ಬಿಣದ ತಲವಾರ್ ಹಾಗೂ ಖಾರದ ಪುಡಿ ಪ್ಯಾಕೇಟ್ ಇರುವುದು ಕಂಡು ಬಂದಿದೆ.