
ದರೆಗುಡ್ಡೆಯ ಇಟಲ ಶ್ರೀ ಸೋಮನಾಥೇಶ್ವರನಿಗೆ ನಾಳೆ ಬ್ರಹ್ಮಕಲಶಾಭಿಷೇಕದ ಸಂಭ್ರಮ
ಮೂಡುಬಿದಿರೆ: ದ.ಕ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾಮದಲ್ಲಿರುವ ಅತ್ಯಂತ ಪುರಾತನವಾಗಿರುವ ಇಟಲ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಾಲಯವು ಪುನರ್ ನಿಮಾ೯ಣಗೊಂಡು ಮೇ.2 ರಂದು ಬ್ರಹ್ಮಕಲಶಾಭಿಷೇಕದ ಸಂಭ್ರಮದಲ್ಲಿದೆ.
3 ಕೂಟ (ಮೂಜಿಮಲೆ) ಬೆಟ್ಟದ ತಪ್ಪಲಿನಲ್ಲಿ ಪ್ರಕೃತಿರಮಣೀಯ ಪ್ರದೇಶದಲ್ಲಿ ನೆಲೆನಿಂತ ಪರಮೇಶ್ವರನ ಕ್ಷೇತ್ರ ಇದಾಗಿದ್ದು, ಪರಹುರಾಮ ಮಹರ್ಷಿಯವರ ಶಿಷ್ಟೋತ್ತಮರಾಗಿದ್ದ ಅಂಬರೀಷ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಶಿವಲಿ೦ಗವೇ ಇಟಲ ಶ್ರೀ ಸೋಮನಾಥೇಶ್ವರ ಎಂಬ ಪ್ರತೀತಿ ಇದೆ. ಅಂಬರೀಷ ಮಹಾಮುನಿಗಳು ಕಾತಿಯಿಂದ ಕಾಂತಾವರ ಕ್ಷೇತ್ರಕ್ಕೆಂದು ಶಿವಲಿಂಗವನ್ನು ಕೊಂದೊಯ್ಯುವ ಸಂದರ್ಭದಲ್ಲಿ ದಣಿದು ಶಿವಲಿಂಗವನ್ನು ಇಟ್ಟೆಲ ಗಿಡದ ಎಲೆಯ ಮೇಲೆ ಇರಿಸಿ ತುಸು ಹೊತ್ತು ವಿಶ್ರಮಿಸುತ್ತಾರೆ. ನಂತರ ಸಂಧ್ಯಾವಂದನೆ ಮುಗಿಸಿ ಹೊರಡುವಾಗ ಇತೈಲ ಗಿಡದ ಮೇಲೆ ಇರಿಸಿದ ಶಿವಲಿಂಗವನ್ನು ಮೇಲೆತ್ತಲು ಪ್ರಯತ್ನಿಸುತ್ತಾರೆ. ಆದರೆ ಶಿವಲಿಂಗವನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ಜೊತೆಯಲ್ಲಿ ಬಂದಿರುವ ಅನೆಯಿಂದ ಶಿವಲಿಂಗವನ್ನು ಮೇಲೆತ್ತಲು ಪ್ರಯತ್ನಿಸುತ್ತಾರೆ.
ಆ ಕ್ಷಣದಲ್ಲಿ ಒಂದು ಅದ್ಭುತ ನಡೆಯುತ್ತದೆ. ಲಿಂಗವನ್ನು ಎತ್ತಲು ಪ್ರಯತ್ನಿಸಿದ ಅನೆಯೇ ಕಲ್ಲಾಗುತ್ತದೆ. ಶಿವಲಿಂಗವು ಅಲ್ಲಿಯೇ ನೆಲೆನಿಂತ ಕಾರಣದಿಂದ ಮುಂದಕ್ಕೆ ಈ ಪ್ರದೇಶ ‘ಇಟಲ’ ಎಂಬ ಹೆಸರನ್ನು ಪಡೆಯಿತು. ಜ್ಯೋತಿರ್ಮಯವಾದ ಶಿವಲಿಂಗ ‘ಶ್ರೀ ಸೋಮನಾಥೇಶ್ವರ’ ಎಂಬ ಹೆಸರಿನಲ್ಲಿ ಮಹತೋಭಾರನೆನಿಸಿ ಪ್ರಸಿದ್ಧಿಯಾಯಿತು ಎನ್ನುತ್ತದೆ ಇಲ್ಲಿನ ಸ್ಥಳಪುರಾಣ.
ದೇವಾಲಯದ ಗರ್ಭಗುಡಿಯ ಸುತ್ತಲೂ ವರ್ಷಪೂರ್ತಿ ತುಂಬಿರುವ ನೀರಿನ ಹರಿವು ಇರುವುದು ವಿಶೇಷ ಜೊತೆಗೆ ಇಲ್ಲೇ ತ್ರಿಕೂಟ ಬೆಟ್ಟದಿಂದ ಹರಿಯುವ ನೈಸರ್ಗಿಕ ಝರಿಯೊಂದರಿಂದ ವರ್ಷಪೂರ್ತಿ ಜಲಾಭಿಷೇಕ ಹೊಂದುವ ಅಗ್ನಿಗಣಪತಿಯ ಪರಮ ಸಾನ್ನಿಧ್ಯವಿದೆ. ದೇವಾಲಯದ ಹೊರಗೆ ಬಂಡೆಗಳ ನಡುವೆ ಸ್ಥಾಪಿತನಾಗಿರುವ ಅಗ್ನಿಗಣಪನಿಗೆ ನಿತ್ಯ ನಿರಂತರ ಜಲದ ಅಭಿಷೇಕವಾಗುವ ದೃಶ್ಯ ಭಕ್ತಿಯ ಭಾವ ಹೊಮ್ಮಿಸುತ್ತದೆ.
ಇದರೊಂದಿಗೆ ದೇವಳದಲ್ಲಿ ನಾಗದೇವರ ಸಾನ್ನಿಧ್ಯವಿದೆ. ಅಲ್ಲದೆ ಕ್ಷೇತ್ರರಕ್ಷಕ ಹಾಗೂ ಭಕ್ತರನ್ನು ಪೊರೆಯುವ ದೈವಗಳ ಸಾನ್ನಿಧ್ಯವಿದೆ ಪಣಪಿಲ ಅರಮನೆಗೆ ಸೇರಿದ ಈ ದೇವಾಲಯದ ಪೂರ್ಣ ಮೇಲುಸ್ತುವಾರಿಯನ್ನು ಅರಮನೆಯ ಹಿರಿಯರು ಪರಂಪರಾನುಗತವಾಗಿ ನಡೆಸಿಕೊಂಡು ಬಂದಿರುತ್ತಾರೆ. ಇದೀಗ ಅರಮನೆಯ ಹಿರಿಯ ಸದಸ್ಯರಾದ ಬಿ ವಿಮಲ್ ಕುಮಾರ್ ಶೆಟ್ಟಿಯವರು ಅನುವಂಶಿಕ ಆಡಳಿತ ಮೊಕ್ತಸರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಟಲ ಶ್ರೀ ಸೋಮನಾಥೇಶ್ವರ ದೇವರು ಪಣಪಿಲ ಅರಮನೆಯ ಪಟ್ಟದ ದೇವರಾಗಿದ್ದು, ಈ ದೇವಾಲಯವು ಪಣಪಿಲ, ದರೆಗುಡ್ಡೆ, ಕೆಲ್ಲಪುತ್ತಿಗೆ, ವಾಲ್ದಾಡಿ, ಮಾಂಟ್ರಾಡಿ, ಶಿರ್ತಾಡಿ, ನೆಲ್ಲಿಕಾರು, ಮೂಡುಕೊಣಾಜೆ, ಪಡುಕೊಣಾಜೆ ಹೀಗೆ ಒಟ್ಟು 2 ಗ್ರಾಮಗಳ ಮಾಗಣೆಯನ್ನು ಹೊಂದಿರುತ್ತದೆ. ಹೀಗಾಗಿ ಇಟಲ ಶ್ರೀ ಸೋಮನಾಥೇಶ್ವರನು 9 ಗ್ರಾಮಗಳ ಗ್ರಾಮಸ್ಥರು ಆರಾಧನೆ ಮಾಡುವ ಮಾಗಣೆ ದೇವರು.
ಅತ್ಯಂತ ಪುರಾತನವಾದ ಈ ದೇವಾಲಯದ ಜೀರ್ಣೋದ್ದಾರದ ಚಿಂತನೆಯನ್ನು ಖ್ಯಾತ ಜ್ಯೋತಿಷಿ ಶ್ರೀ ಶ್ರೀಧರ ಗೋರೆ ಇವರ ಸ್ವರ್ತಾರೂಢ ಪ್ರಶ್ನೆಯಲ್ಲಿ ಮೂಡಿಬಂದಂತೆ ಹಾಗೂ ಖ್ಯಾತ ವಾಸ್ತುಶಿಲ್ಪಿ ಮುನಿಯಂಗಳ ಕೃಷ್ಣಪ್ರಸಾದ್ ಇವರ ನಿರ್ದೇಶನದಂತೆ ಇಂಜಿನಿಯರ್ ಉಮೇಶ್ ಕುಲಾಲ್ ಅಳಿಯೂರು ಇವರ ಸಲಹೆಯ೦ತೆ ಜೀರ್ಣೋದ್ಧಾರ ಕೆಲಸಗಳನ್ನು ಮಾಡಲಾಗಿದೆ.
ಶ್ರೀ ಸೋಮನಾಥೇಶ್ವರ ದೇವರ ಗರ್ಭಗುಡಿ, ಶ್ರೀ ಮಹಾಗಣಪತಿಯ ನಾನ್ನಿಧ್ಯ, ಶ್ರೀ ಮಹಿಷಮರ್ದಿನಿ ದೇವಿಯ ಸಾನ್ನಿಧ್ಯ, ಸುತ್ತುಪೌಳಿ, ನಾಗದೇವರ ಸಾನ್ನಿಧ್ಯ, ದೈವಗಳ ಸಾನ್ನಿಧ್ಯ ಇತ್ಯಾದಿ ಜೀರ್ಣೋದ್ಧಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್, ಪಣಪಿಲ ಅರಮನೆ ಕುಟುಂಬಸ್ಥರು, ಕೊನ್ನಾರ ಮಾಗಣೆ ಗ್ರಾಮಗಳ ಭಗವದ್ಭಕ್ತರ ಹಾಗೂ ಪರವೂರ ಭಗವರಕ್ತದಾನಿಗಳ ಸಹಾಯದಿಂದ ಭವ್ಯವಾಗಿ, ಶಿಲಾಮಯವಾಗಿ ನವನಿರ್ಮಾಣಗೊಂಡಿದೆ.
ಬ್ರಹ್ಮಕಲಶೋತ್ಸವ:
ಬೆ.ಗಂ. 8ರ ವೃಷಭ ಲಗ್ನ ಸುಮುಹೂರ್ತದಲ್ಲಿ ಸೋಮನಾಥೇಶ್ವರ, ಶ್ರೀ ಮಹಿಷ ಮರ್ಧಿನಿ, ಶ್ರೀ ಮಹಾಗಣಪತಿ ದೇವರಿಗೆ ಬಹಕಲಶಾಭಿಷೇಕ ನಡೆಯಲಿದೆ. ಅಪರಾಹ್ನ 1ಕ್ಕೆ ಮಹಾ ಅನ್ನಸಂತರ್ಪಣೆ, 2ರಿಂದ ಪಟ್ಟ, ಕಕ್ಕೆಪದವು, ಅಜೇರು ಕಾವ್ಯಶ್ರೀ ಬಳಗದವರಿಂದ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮವಿದೆ.
ರಾತ್ರಿ 7ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಡಾ. ಡಿ. ವೀರೇಂದ್ರ ಹೆಗ್ಗಡೆ, ಶಾಸಕ ಉಮಾನಾಥ ಕೋಟ್ಯಾನ್, ವೇ.ಮೂ. ಲ.ನಾ. ಆಸ್ರಣ್ಣರು, ಸಂಸದ ಕ್ಯಾ. ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಕೆ. ಅಭಯಚಂದ್ರ, ಶಶಿಧರ ಶೆಟ್ಟಿ ಉದ್ಯಮಿ, ತಹಶೀಲ್ದಾರ ಶ್ರೀಧರ ಮುಂದಲ ಮನಿ, ಎಂ.ಕೆ. ವಿಜಯಕುಮಾರ್ ಕಾರ್ಕಳ, ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯುವರಾಜ ಜೈನ್, ದರೆಗುಡ್ಡೆ ಪಂ. ಅಧ್ಯಕ್ಷ ಅಶೋಕ ಶೆಟ್ಟಿ ಬೇಲೊಟ್ಟು ಶ್ರೀಪತಿ ಭಟ್, ಗೋಪಾಲ ಶೆಟ್ಟಿ ನರೆಂಗೊಟ್ಟು ದರೆಗುಡ್ಡೆ ಮೊದಲಾದವರು ಭಾಗವಹಿಸಲಿದ್ದಾರೆ.
ರಾತ್ರಿ ಲಾಡಿ ತಂಡದಿಂದ ಕುಣಿತ ಭಜನೆ, ಸಾಲಿಗ್ರಾಮ ಮೇಳದವರಿಂದ ಶಿವ ಪಂಚಾಕ್ಷರಿ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿದೆ. ಕ್ಷೇತ್ರದಲ್ಲಿ ಜಾತ್ರೆ ಮೇ 2ರಿಂದ 7 ರವರೆಗೆ ಜರಗಲಿದೆ.