
ಗುಡುಗು ಸಿಡಿಲಿನ ಅಬ್ಬರ: ಬೆಳಗ್ಗಿನ ಜಾವ ಸುಳ್ಯದಲ್ಲಿ ಭರ್ಜರಿ ಮಳೆ: ರಸ್ತೆಗಳು ಕೆಸರುಮಯ
Thursday, May 1, 2025
ಸುಳ್ಯ: ಗುಡುಗು ಸಿಡಿಲಿನ ಅಬ್ಬರದೊಂದಿಗೆ ಗುರುವಾರ ಬೆಳಗ್ಗಿನ ಜಾವ ಸುಳ್ಯದಲ್ಲಿ ಭರ್ಜರಿ ಮಳೆಯಾಗಿದೆ.
ಕಿವಿಗಪ್ಪಳಿಸುವ ಭಾರೀ ಗುಡುಗು ಸಿಡಿಲಿನೊಂದಿಗೆ ಬೆಳಗ್ಗಿನ ಜಾವ 3 ಗಂಟೆಯ ಬಳಿಕ ಮಳೆಯಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿಯಿತು. ಹಗಲಿನ ವೇಳೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಸುಳ್ಯ ನಗರದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಮತ್ತು ಅಮೃತ್ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಗೆ ರಸ್ತೆ ಬದಿ ಅಗೆದು ಹಾಕಿದ ಕಾರಣ ಮಳೆ ಬಂದಾಗ ರಸ್ತೆಗಳು ಕೆಸರುಮಯವಾಗಿ ಸಂಚಾರ ದುಸ್ತರವಾಗಿತ್ತು. ರಸ್ತೆಯಲ್ಲಿ ಅಲ್ಲಲ್ಲಿ ಕೆಸರು ತುಂಬಿತ್ತು. ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿತ್ತು.