
ಪುತ್ತೂರಲ್ಲಿ ಧಾರಾಕಾರ ಮಳೆ ಅಬ್ಬರಕ್ಕೆ ಹಾನಿ
Monday, May 26, 2025
ಪುತ್ತೂರು: ಕಳೆದ ಎರಡು ದಿನಗಳಿಂದ ಪುತ್ತೂರಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಹಲವೆಡೆ ಕೃಷಿ-ಮನೆಗಳಿಗೆ ಹಾನಿ ಉಂಟಾಗಿದೆ.
ಪುತ್ತೂರಿನ ಬಲ್ನಾಡು ಗ್ರಾಮದ ಮಹಮ್ಮದ್ ಎಂಬವರ ಮನೆಗೆ ಬರೆ ಜರಿದು ಬಿದ್ದು ಅಪಾರನಷ್ಟ ಉಂಟಾಗಿದೆ. ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿನ ಅಣ್ಣಪ್ಪ ಎಂಬವರಿಗೆ ಸೇರಿದ ಮನೆಗೆ ಬರೆ ಕುಸಿದುಬಿದ್ದು ಮನೆಗೆ ಹಾನಿಯಾಗಿದೆ. ಸಾಮೆತ್ತಡ್ಕ ೩ನೇ ಕ್ರಾಸ್ ಎಂಬಲ್ಲಿ ರಸ್ತೆ ಜರಿದು ಬಿದ್ದಿದೆ. ಇದರಿಂದ ಈ ಭಾಗದಲ್ಲಿ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಾಡಳಿತ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ಬಪ್ಪಳಿಗೆಯ ಜಮಾಲ್ ಎಂಬವರ ಮನೆಯ ಆವರಣಗೋಡೆ ಮಳೆಯ ರಭಸಕ್ಕೆ ಕುಸಿದುಬಿದ್ದು, ನಷ್ಟ ಸಂಭವಿಸಿದೆ. ಇಲ್ಲಿನ ಯಾಕೂಬ್ ಎಂಬವರ ಮನೆಯ ಭಾಗದಲ್ಲಿ ರಸ್ತೆಯ ಬದಿಗೆ ಕಟ್ಟಲಾದ ತಡೆಗೋಡೆ ಜರಿದುಬಿದ್ದಿದೆ.
ಉಪ್ಪಿನಂಗಡಿಯಲ್ಲಿ ಮನೆಯೊಂದಕ್ಕೆ ತೆಂಗಿನಮರ ಬಿದ್ದು ಹಾನಿ ಉಂಟಾಗಿದೆ. ಇಲ್ಲಿನ ರಾಮನಗರದ ನಿವಾಸಿ ಗೀತಾ ರಾಮಚಂದ್ರ ಎಂಬವರಿಗೆ ಸೇರಿದ ಮನೆಗೆ ಪಕ್ಕದಲ್ಲಿದ್ದ ತೆಂಗಿನಮರ ಬಿದ್ದು ನಷ್ಟ ಸಂಭವಿಸಿದೆ.