
ಅವಿಭಜಿತ ದ.ಕ. ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷೆ ಲೀನಾ ಮಥಾಯಸ್ ರಸ್ತೆ ಅಪಘಾತದಲ್ಲಿ ಸಾವು
ಶಿರ್ವ: ಶಿರ್ವದ ಹಿರಿಯ ಸಾಮಾಜಿಕ ಕಾರ್ಯಕರ್ತೆ, ಅವಿಭಜಿತ ದ.ಕ. ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷೆ ಹಿರಿಯ ಕಾಂಗ್ರೆಸ್ ನಾಯಕಿ ಲೀನಾ ಮಥಾಯಸ್ ಭಾನುವಾರ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶಿರ್ವ ಇರ್ಮಿಜಿ ಚರ್ಚ್ ಬಳಿಯ ರೇಚಲ್ ರೆಸ್ಟೋರೆಂಟ್ ಬಳಿ ನಿಂತಿದ್ದ ಇವರಿಗೆ ಬೆಳ್ಮಣ್ ಕಡೆಯಿಂದ ಶಿರ್ವಕ್ಕೆ ಸಾಗುತ್ತಿದ್ದ ಕಾರು ಢಿಕ್ಕಿ ಹೊಡೆದು ಸೋಂಟ, ಕೈ ಹಾಗೂ ತಲೆಗೆ ಗಾಯವಾಗಿ ರಕ್ತಸ್ರಾವ ಆಗಿದ್ದು, ಕೂಡಲೇ ಅವರನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದು, ವೈದ್ಯಾಧಿಕಾರಿಗಳ ಸೂಚನೆಯಂತೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೀನಾ ಮತಾಯಸ್ ಶಿರ್ವ ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕಿಯಾಗಿದ್ದು, ಅವಿಭಜಿತ ದ.ಕ. ಜಿಲ್ಲಾ ಪರಿಷತ್ ಇದರ ಉಪಾಧ್ಯಕ್ಷರಾಗಿ, ಶಿರ್ವ ಗ್ರಾ.ಪಂ. ಸದಸ್ಯರಾಗಿ,ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಮಾಜಿ ಸಚಿವ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾಂಗ್ರೆಸ್ ನಾಯಕ ದಿನೇಶ್ ಸುವರ್ಣ ಶಿರ್ವ, ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ಸಂತಾಪ ವ್ಯಕ್ತಪಡಿಸಿದ್ದಾರೆ.