
ಕುಡುಪು ಗುಂಪು ಹತ್ಯೆ ಪ್ರಕರಣ: ಗೃಹಸಚಿವರ ಹೇಳಿಕೆಗೆ ಖಂಡನೆ
ಉಳ್ಳಾಲ: ಕುಡುಪು ಸಮೀಪ ವಲಸೆ ಕಾರ್ಮಿಕನ ಹತ್ಯೆ ಪ್ರಕರಣದಲ್ಲಿ ಗೃಹಸಚಿವರು ನೀಡಿರುವ ಹೇಳಿಕೆ ಖಂಡನೀಯ. ಅಧಿಕಾರದಲ್ಲಿದ್ದು ಇಂತಹ ಮಾತು ಆಡುವುದು ಸರಿಯಲ್ಲ. ಅಂತಹವರಿಗೆ ಅಧಿಕಾರ ಕೊಡಲೇಬಾರದು. ಪಾಕಿಸ್ತಾನ್ ಜಿಂದಾಬಾದ್ ಅಂದರೂ ಅದಕ್ಕೆ ಮರಣದಂಡನೆ ಶಿಕ್ಷೆಗೆ ಒಳಪಡಿಸುವುದೇ? ಅಥವಾ ಸಾಮೂಹಿಕವಾಗಿ ಹತ್ಯೆ ನಡೆಸುವುದೇ? ಎಂದು ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ತೊಕ್ಕೊಟ್ಟು ಖಾಸಗಿ ಸಭಾಂಗಣದಲ್ಲಿ ಕರೆದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಾಕಿಸ್ತಾನ್ ಜಿಂದಾಬಾದ್ ಅಂದಿದ್ದಕ್ಕೆ ವಲಸೆ ಕಾರ್ಮಿಕನ ಹತ್ಯೆ ನಡೆಸಲಾಗಿದೆ ಎಂದು ಗೃಹ ಸಚಿವರು ಹೇಳುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಘಟನೆಯ ಸತ್ಯಾಸತ್ಯತೆಯನ್ನು ಅರಿಯದೆ ಹೇಳಿಕೆ ನೀಡಿರುವುದು ಖಂಡನೀಯ.
ಇಂತಹ ಇನ್ನೊಂದು ಕೃತ್ಯ ಜಿಲ್ಲೆಯಲ್ಲಿ ಆಗಬಾರದು. ಗೃಹಸಚಿವರಿಗೆ ಜಿಲ್ಲೆಯಿಂದ ಮಾಹಿತಿ ಕೊಟ್ಟವರು ಯಾರು ಎಂಬುದನ್ನು ತಿಳಿಸಬೇಕಿದೆ. ಮುಂದಿನ 15 ದಿನಗಳ ಒಳಗೆ ಎಲ್ಲಾ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಉಳ್ಳಾಲ ಕಾಂಗ್ರೆಸ್ ಬೀದಿಗೆ ಇಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಮಾತನಾಡಿ, ಜಿಲ್ಲೆಯನ್ನು ಪ್ರವಾಸೋದ್ಯಮ ಅಭಿವೃದ್ಧಿ ನಡೆಸುವ ಸಂದರ್ಭದಲ್ಲಿ ಗುಂಪು ಹತ್ಯೆ ನಡೆಸಲಾಗಿದೆ. ಇದರಿಂದ ಅಭಿವೃದ್ಧಿ ಬಹಳಷ್ಟು ಕಷ್ಟವಿದೆ. ಕೃತ್ಯವೆಸಗಿದ ಯುವಕರಿಗೆ ಕಾನೂನಿನಡಿ ಸರಿಯಾದ ಶಿಕ್ಷೆಯಾಗಬೇಕು, ಇನ್ನು ಬಾಕಿ ಉಳಿದವರನ್ನು ೧೫ ದಿನಗಳ ಒಳಗೆ ಬಂಧಿಸಬೇಕಿದೆ. ಇಲ್ಲವಾದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸುಮ್ಮನಿರುವುದಿಲ್ಲ. ಅಮಾನವೀಯತೆ ಮೆರೆದ ಎಲ್ಲಾ ವ್ಯಕ್ತಿಗಳನ್ನು ಗಡೀಪಾರು ಮಾಡಬೇಕಿದೆ. ಮಾನಸಿಕ ಅಸ್ವಸ್ಥನಾಗಿರುವ ವ್ಯಕ್ತಿ ದುಡಿಯಲು ಬಂದವನನ್ನು ಹತ್ಯೆ ನಡೆಸಿರುವುದು ಜಿಲ್ಲೆಗೆ ಅವಮಾನವಾಗಿದೆ ಎಂದರು.
ಉಳ್ಳಾಲ ನಗರಸಭೆ ಮಾಜಿ ಉಪಾಧ್ಯಕ್ಷ ಅಯೂಬ್ ಮಂಚಿಲ ಮಾತನಾಡಿ, ಗುಂಪು ಹತ್ಯೆ ದಕ್ಷಿಣ ಕನ್ನಡ ಜಿಲ್ಲೆಗೆ ಕಪ್ಪು ಚುಕ್ಕೆ. ಕ್ಷಲ್ಲಕ ಕಾರಣವನ್ನಿಟ್ಟುಕೊಂಡು 40 ಮಂದಿ ಸೇರಿಕೊಂಡು ಒಬ್ಬ ಯುವಕನ ಹತ್ಯೆ ನಡೆಸಿರುವ ಹೀನ ಕೃತ್ಯವನ್ನು ಎಲ್ಲರೂ ಖಂಡಿಸಬೇಕಿದೆ. ಕೃತ್ಯದಲ್ಲಿ ತೊಡಗಿದ್ದ ಹಲವರನ್ನು ರಕ್ಷಣೆ ಮಾಡುವ ಹುನ್ನಾರ ಪೊಲೀಸ್ ಅಧಿಕಾರಿಗಳಿಂದ ನಡೆದಿದೆ. ಈಗಾಗಲೇ ಪ್ರಕರಣದ ದಿಕ್ಕು ತಪ್ಪಿಸಲು ಮುಂದಾದ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಇಲ್ಲಿ ತನಕ ಗುಂಪುಹತ್ಯೆ ನಡೆದಿಲ್ಲ. ಯುವಕನಿಗೆ ಆಗಿರುವ ಅನ್ಯಾಯದಿಂದ ಕುಟುಂಬಕ್ಕೆ ಆಗಿರುವ ನೋವು ತಡೆಯಲು ಅಸಾಧ್ಯ. ಗೃಹಸಚಿವರು, ಉಸ್ತುವಾರಿ ಸಚಿವರು, ಸ್ಪೀಕರ್ ಅವರಲ್ಲಿ ಕೋರಿಕೆ ತಪ್ಪಿತಸ್ಥ ಎಲ್ಲರನ್ನೂ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮೃತ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಿದೆ ಎಂದರು.
ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಆಳ್ವಿನ್ ಡಿಸೋಜ ಮಾತನಾಡಿ, ಹೊರಜಗತ್ತಿಗೆ ತಪ್ಪು ಮಾಹಿತಿ ಕೊಟ್ಟ ಪೊಲೀಸರನ್ನು ಅಮಾನತಿನಲ್ಲಿಡುವ ಬದಲು ಮೂವರು ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಬೇಕಿದೆ. ಕೋಮು ದ್ವೇಷ ಹರಡಿಸುವ ಕೆಲಸ ಪೊಲೀಸ್ ಇಲಾಖೆಯಿಂದಲೇ ಆಗಿದೆ. ಪೊಲೀಸ್ ಇಂಟೆಲಿಜೆನ್ಸ್ ಎಲ್ಲಿ ಸತ್ತು ಹೋಗಿದೆ. ಕೃತ್ಯವನ್ನು ಅಲ್ಪಸಂಖ್ಯಾತ ಘಟಕ ಎಂದಿಗೂ ಸಹಿಸುವುದಿಲ್ಲ. ಸೂಕ್ತ ಕ್ರಮವನ್ನು ವಹಿಸದೇ ಇದ್ದಲ್ಲಿ ಮುಂದಿನ 15 ದಿನಗಳ ಒಳಗೆ ಉಳಿದ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಬೀದಿಗೆ ಇಳಿದು ಹೋರಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭ ಮನ್ಸೂರ್ ಮಂಚಿಲ, ಯುವ ಕಾಂಗ್ರೆಸ್ ನಗರಾಧ್ಯಕ್ಷ ರಶೀದ್ ಕೋಡಿ ಉಪಸ್ಥಿತರಿದ್ದರು.