
ಜಿಲ್ಲೆಯಲ್ಲಿ ನಿರಂತರ ಕೊಲೆಗಳು ನಡೆಯಲು ಪೊಲೀಸ್ ವೈಫಲ್ಯ ಕಾರಣ: ಫಾರೂಕ್ ಉಳ್ಳಾಲ್
ಉಳ್ಳಾಲ: ದ.ಕ. ಜಿಲ್ಲೆಯ ಶಾಂತಿ ಹದಗೆಡಲು, ನಿರಂತರ ಕೊಲೆಗಳು ನಡೆಯಲು ಪೊಲೀಸ್ ಇಲಾಖೆ ವೈಫಲ್ಯ ಕಾರಣ. ಸುಹಾಸ್ ಶೆಟ್ಟಿ ಕೊಲೆಯ ಬಳಿಕ ನಡೆದ ಘಟನೆ, ಸಂತಾಪ ಸಭೆಯಲ್ಲಿ ಶ್ರೀಕಾಂತ್ ಶೆಟ್ಟಿ, ಭರತ್ ಕುಮ್ಡೇಲ್ ಕೋಮುಪ್ರಚೋದನಾ ಭಾಷಣ ಮಾಡಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ದಿಟ್ಟತನದಿಂದ ಕ್ರಮ ಕೈಗೊಂಡಿದ್ದರೆ ಅಬ್ದುಲ್ ರಹ್ಮಾನ್ ಎಂಬ ಅಮಾಯಕ ವ್ಯಕ್ತಿಯ ಕೊಲೆ ನಡೆಯುತ್ತಿರಲಿಲ್ಲ ಎಂದು ಕೆಪಿಸಿಸಿ ಸಂಯೋಜಕ ಫಾರೂಕ್ ಉಳ್ಳಾಲ್ ಹೇಳಿದರು.
ಅವರು ಉಳ್ಳಾಲ ನಗರ ಕಾಂಗ್ರೆಸ್ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಶ್ರಫ್‌ನ ಗುಂಪು ಹತ್ಯ ನಡೆದ ಸಂದರ್ಭದಲ್ಲೂ ಸೂಕ್ತ ಕ್ರಮ ಕೈಗೊಳ್ಳಬೇಕಾದ ಪೊಲೀಸರಿಗೆ ಈ ಘಟನೆ ಹೇಗೆ ನಡೆದಿದೆ ,ಎಲ್ಲಿ ಪ್ರಚೋದನಾತ್ಮಕ ಸಿದ್ಧತೆ ನಡೆದಿದೆ ಎಂಬ ಮಾಹಿತಿ ಇದೆ. ಆದರೆ ಕ್ರಮ ಕೈಗೊಳ್ಳುವ ಹಾದಿಯಲ್ಲಿ ಅವರು ನಡೆಯಲಿಲ್ಲ. ಸುಹಾಸ್ ಶೆಟ್ಟಿ ಹಾಗೂ ಅಶ್ರಫ್ ಕೊಲೆ ಪ್ರಕರಣ ತನಿಖೆಯನ್ನು ಪೊಲೀಸರು ಮುತುವರ್ಜಿ ವಹಿಸಿ ನಡೆಸಿದ್ದರೆ ರಹ್ಮಾನ್ ಅವರ ಕೊಲೆ ನಡೆಯುತ್ತಿರಲಿಲ್ಲ ಎಂದರು.
ಬಜ್ಪೆಯಲ್ಲಿ ನಡೆದ ಸಭೆಯಲ್ಲಿ ಶ್ರೀಕಾಂತ್ ಶೆಟ್ಟಿ, ಅದೇ ರೀತಿ ಭರತ್ ಕುಮ್ಡೇಲ್ ಅವರ ಕೋಮು ಪ್ರಚೋದನೆ ಭಾಷಣ ಅಬ್ದುಲ್ ರಹ್ಮಾನ್ ಕೊಲೆಗೆ ಪ್ರೇರಣೆ ನೀಡಿದೆ. ಪೊಲೀಸರು ಇವರಿಬ್ಬರನ್ನು ಆರೋಪಿಗಳನ್ನಾಗಿ ಪರಿಗಣಿಸಿ ಅವರ ವಿರುದ್ಧ ಚಾರ್ಜ್ ಶೀಟ್ ದಾಖಲು ಮಾಡಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಂತಿ ಪ್ರಿಯ ಜಿಲ್ಲೆಯಲ್ಲಿ ನಡೆದ ಈ ಹತ್ಯೆ ಸೌಹಾರ್ಧ ಬಯಸುವ ಎಲ್ಲರ ಮೇಲೆ ನಡೆದ ಹಲ್ಲೆ ಹಾಗೂ ಹತ್ಯೆಯಾಗಿದೆ. ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಹಾಗೂ ಹತ್ಯೆಯಾದ ಅಬ್ದುಲ್ ರಹ್ಮಾನ್ ಕುಟುಂಬದ ಜೊತೆ ಸದಾ ನಾವು ಇರುತ್ತೇವೆ ಎಂದರು.
ದುರಾದೃಷ್ಟವಶಾತ್ ಈ ಹತ್ಯೆ ತಪ್ಪಿಸುವ ಎಲ್ಲಾ ಆಯಾಮಗಳು ಹಾಗೂ ಬಂದೋಬಸ್ತುಗಳು ಪೊಲೀಸ್ ಇಲಾಖೆ ಮಾಡುತ್ತಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ.ಸುಹಾಸ್ ಶೆಟ್ಟಿ ಕೊಲೆಯಾದ ದಿನದಿಂದ ಸಂಘ ಪರಿವಾರದ ಶ್ರೀಕಾಂತ್ ಶೆಟ್ಟಿ ಹಾಗೂ ಭರತ್ ಕುಮ್ಡೇಲು ವಿವಿಧ ವೇದಿಕೆಗಳಲ್ಲಿ ಹಾಗೂ ಸಂತಾಪ ಸಭೆಗಳಲ್ಲಿ ಜನರನ್ನು ಉದ್ರೇಕಗೊಳಿಸುವ ಭಾಷಣಗಳನ್ನು ಮಾಡುವ ಮೂಲಕ ಪ್ರಚೋದನೆ ಕೊಡುತ್ತಿದ್ದರು. ಇಂತಹ ಬಾಷಣಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟದ್ದು ಪೊಲೀಸ್ ಇಲಾಖೆಯ ತಪ್ಪಾಗಿದೆ. ದ್ವೇಷ ಬಾಷಣಗಳಿಗೆ ಅವಕಾಶ ಕೊಟ ಕಾರಣ ಇಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಫಾ ಮಲಾರ್ ಮಾತನಾಡಿ, ಸುಹಾಸ್ ಶೆಟ್ಟಿ ಕೊಲೆಯ ಪ್ರತೀಕಾರದ ಭಾಗವಾಗಿ ಅಬ್ದುಲ್ ರಹ್ಮಾನ್ ಎಂಬವರ ಕೊಲೆ ನಡೆದಿದೆ. ಅವರನ್ನು ಬಾಡಿಗೆ ನೆಪದಲ್ಲಿ ಕರೆದು ಈ ಕೃತ್ಯ ಎಸಗಿದ್ದಾರೆ. ಕೊಲೆಗೆ ಕೊಲೆ ಪರಿಹಾರ ಆಗುವುದಿಲ್ಲ. ಕೊಲೆ ಮಾಡಿದವರ ವಿರುದ್ಧ ಆರಂಭದಲ್ಲೇ ಕಾನೂನಾತ್ಮಕ ಕ್ರಮ ಇಲಾಖೆಯಿಂದ ಆಗಬೇಕಿತ್ತು ಎಂದರು.
ಮಂಗಳೂರಿನಲ್ಲಿ ಅಶ್ರಫ್ ಕೊಲೆ ಆದಾಗ ಆ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಪೊಲೀಸ್ ಇಲಾಖೆ ಹೇಳಿದೆ. ಕೆಲ ಸಮಯದ ಬಳಿಕ ಸ್ಥಳೀಯ ಬಿಜೆಪಿ ನಾಯಕರೊಬ್ಬರ ಕೋರಿಕೆ ಮೇರೆಗೆ ಆತ ಪಾಕ್ ಪರ ಘೋಷಣೆ ಮಾಡಿದ ಕಾರಣ ಹತ್ಯೆ ಆಗಿದೆ ಎಂದು ಪ್ರಕರಣ ದಾಖಲಾಗುತ್ತದೆ. ತನಿಖೆ ನಡೆಸಿದ ಪೊಲೀಸರು ಅಶ್ರಫ್ ಅಂತಹ ಘೋಷಣೆ ಕೂಡಿಲ್ಲ ಎಂದರು.
ಈ ಪ್ರಕರಣದ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಲವು ಪ್ರಕರಣಗಳ ಆರೋಪಿ ಸುಹಾಸ್ ಶೆಟ್ಟಿ ಕೊಲೆಯಾಯಿತು. ಈ ಘಟನೆ ಬಳಿಕ ಶರಣ್ ಪಂಪ್‌ವೆಲ್ ಬಂದ್‌ಗೆ ಕರೆ ನೀಡಿದರು. ಮರುದಿನ ಬಸ್‌ಗೆ ಕಲ್ಲು ತೂರಾಟ, ಅಂಗಡಿಗೆ ಕಲ್ಲು ತೂರಾಟ ನಡೆದಿದೆ. ಜತೆಗೆ ಪ್ರತೀಕಾರವಾಗಿ ಎರಡು ಕೊಲೆಯತ್ನ ಘಟನೆ ನಡೆಯಿತು. ಇಂತಹ ಘಟನೆಗಳಿಗೆ ಕಾರಣರಾದವರಿಗೆ ಅರ್ಧ ಗಂಟೆಯಲ್ಲಿ ಬಂಧನ ಜೊತೆಗೆ ಜಾಮೀನು ಆಗುತ್ತದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಸುಹಾಸ್ ಶೆಟ್ಟಿ ಅವರ ಸಂತಾಪ ಸಭೆಯಲ್ಲಿ ಶ್ರೀಕಾಂತ್ ಅವರು ಇನ್ನೊಂದು ಕೊಲೆಗೆ ಪ್ರೇರಣೆ ನೀಡುವ ರೀತಿಯಲ್ಲಿ ಕೋಮು ಭಾಷಣ ಮಾಡಿದ್ದಾರೆ. ಅದೇ ರೀತಿ ಭರತ್ ಕುಮ್ಡೇಲ್ ಪುತ್ತೂರು ನಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದರು. ಇವರ ಕೊಮು ಪ್ರತೀಕಾರ ತೀರಿಸುವ ಹೇಳಿಕೆ ಭಾಗವಾಗಿ ಬಂಟ್ವಾಳ ತಾಲೂಕಿನಲ್ಲಿ ಅಬ್ದುಲ್ ರಹ್ಮಾನ್ ಅವರ ಕೊಲೆ ನಡೆದಿದೆ. ಮೊದಲು ಇಂತಹ ಹೇಳಿಕೆ ನೀಡುವ ಇವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಬ್ದುಲ್ ರಹ್ಮಾನ್ ಓರ್ವ ಅಮಾಯಕ ವ್ಯಕ್ತಿ. ಯಾವುದೇ ಕೇಸ್ ಅವರ ಮೇಲಿರಲಿಲ್ಲ. ಚಾಲಕರಾಗಿ ಕೆಲಸ ಮಾಡಿ ದಿನ ದೂಡುತ್ತಿದ್ದ ಅವರು ಕೋಲ್ತಮಜಲು ಮೊಯ್ಯದ್ದೀನ್ ಜುಮಾ ಮಸೀದಿ ಕಾರ್ಯದರ್ಶಿ ಹಾಗೂ ಎಸ್‌ಕೆಎಸ್‌ಎಸ್‌ಎಫ್‌ನಲ್ಲಿ ಗುರುತಿಸಿ ಧಾರ್ಮಿಕ ಸೇವೆಗೆ ಜಾಸ್ತಿ ಒತ್ತು ನೀಡಿದವರು. ಅವರನ್ನು ಬಾಡಿಗೆ ನೀಡುವ ನೆಪದಲ್ಲಿ ಕರೆಸಿ ತಂಡ ಕೊಲೆ ಮಾಡಿದೆ. ಇನ್ನೋರ್ವ ವ್ಯಕ್ತಿ ತೀರ್ವ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೊಲೆಗೆ ಯಾರು ಕಾರಣ ಎಂಬುದನ್ನು ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಕಾಂಗ್ರೆಸ್ ಈ ಮೂರು ಕೊಲೆಗಳನ್ನು ಖಂಡಿಸುತ್ತದೆ. ಯಾವುದೇ ಕೊಲೆ ನಡೆದರೂ ಅದನ್ನು ಕಾಂಗ್ರೆಸ್ ಖಂಡಿಸುತ್ತದೆ. ಕೊಂದವರಿಗೆ ಪ್ರತೀಕಾರ ಕಾನೂನಾತ್ಮಕವಾಗಿ ಶಿಕ್ಷೆಯ ಮೂಲಕ ನಡೆಯಬೇಕೆ ಹೊರತು ಕೊಲೆಯ ಮೂಲಕ ಅಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಸುಹಾಸ್ ಶೆಟ್ಟಿ ಒಂದು ಪ್ರಕರಣದ ಆರೋಪಿ ಮೊದಲು ಅವರ ವಿರುದ್ಧ ಕಾನುನಾತ್ಮಕ ಕ್ರಮ ಆಗಬೇಕಿತ್ತು ಎಂದರು.
ಇದೀಗ ಅವರನ್ನು ಯಾರು ಕೊಲೆ ಮಾಡಿದ್ದಾರೆ ಅವರ ಕ್ರಮ ಆಗಲಿ, ಕೊಲೆಗೆ ಸುಫಾರಿ,ಪಿತೂರಿ ನೀಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಾಗಬೇಕು. ಇದರಲ್ಲಿ ಜಾತಿ, ಧರ್ಮ ಇಲ್ಲ. ಕಾನೂನು ಎಲ್ಲರಿಗೂ ಸಮಾನ ಆಗಿರಬೇಕು ಇದೀಗ ಅಬ್ದುಲ್ ರಹ್ಮಾನ್ ಕೊಲೆ ಆಗಿದೆ. ಇದಕ್ಕೆ ಕಾರಣ ಇಬ್ಬರ ಕೋಮು ಪ್ರಚೋದನಕಾರಿ ಭಾಷಣ ಆಗಿದೆ. ಅಧಿಕಾರಕ್ಕಾಗಿ, ಗುತ್ತಿಗೆ ಆಧಾರದಲ್ಲಿ ಭಾಷಣ ಮಾಡುವವರು ಇದ್ದಾರೆ. ಈ ಘಟನೆಗೆ ಸಂಬಂಧಿಸಿ ಶ್ರೀಕಾಂತ್ ಶೆಟ್ಟಿ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಬೇಕು. ಪುತ್ತೂರಿನಲ್ಲಿ ಭಾಷಣ ಮಾಡಿದ ಭರತ್ ಕುಮ್ಡೇಲ್ ಅವರನ್ನು ಎರಡನೇ ಆರೋಪಿಯನ್ನಾಗಿ ಮಾಡಬೇಕು. ಉಳಿದವರನ್ನು ಇತರ ಆರೋಪಿಗಳನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಪೊಲೀಸ್ ಇಲಾಖೆಗೆ ಇಂತಹ ಸಂದರ್ಭದಲ್ಲಿ ಉತ್ತಮ ಮಾರ್ಗದರ್ಶನ ನೀಡಬೇಕು. ಕೋಮುಪ್ರಚೋದಕ ಭಾಷಣದ ಪ್ರೇರಣೆಯಿಂದ ಕೊಲೆಯಾದ ಅಬ್ದುಲ್ ರಹ್ಮಾನ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ವ್ಯಕ್ತಿಗೆ ಆಸ್ಪತ್ರೆ ವೆಚ್ಚ ಮಾತ್ರವಲ್ಲದೆ ಮುಂದಿನ ಜೀವನಕ್ಕೆ ಅನುಕೂಲ ಆಗುವಂತೆ ಉತ್ತಮ ಪರಿಹಾರ ಸರ್ಕಾರ ನೀಡಬೇಕು ಎಂದು ಅವರು ಸರ್ಕಾರ ವನ್ನು ಒತ್ತಾಯಿಸಿದರು.
ದಕ್ಷಿಣ ಕನ್ನಡ ಶಿಕ್ಷಿತರ ಜಿಲ್ಲೆ ಇಲ್ಲೇ ಶಾಂತಿ ಹದಗೆಡುತ್ತಿದೆ. ವ್ಯಾಪಾರಿಗಳು ಆರು ಗಂಟೆಗೆ ಅಂಗಡಿ ಮುಚ್ಚಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗೃಹ ಸಚಿವರು ಆಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಇದುವರೆಗೆ ಆಗಿಲ್ಲ. ಯಾಕೆ ಆಗಿಲ್ಲ ಎಂದು ಸರ್ಕಾರ ತಿಳಿಸಬೇಕು. ಪೊಲೀಸರಿಗೆ ನಿರಂತರ ಮಾರ್ಗದರ್ಶನ ನೀಡುವ ಕೆಲಸ ಸರ್ಕಾರದಿಂದ ಆಗಬೇಕು. ಕೋಮು ದಳ್ಳುರಿಯನ್ನು ಹತೋಟಿಯಲ್ಲಿ ಇಡುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು. ಬಾಯಿಗೆ ಬಂದಂತೆ ಮಾತನಾಡುವವರ ಬಾಯಿಗೆ ಬೀಗ ಹಾಕಿ ಅವರನ್ನೇ ಮೊದಲು ಜೈಲಿಗಟ್ಟುವ ಕೆಲಸ ಸರ್ಕಾರ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಕೌನ್ಸಿಲರ್ ಅಯ್ಯೂಬ್ ಮಂಚಿಲ, ಕಾಂಗ್ರೆಸ್ ನಗರ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ರಶೀದ್ ಯೂಸುಫ್ ಉಪಸ್ಥಿತರಿದ್ದರು.