ದಿನೇಶ್ ಗುಂಡೂರಾವ್ ಅಲ್ಪಸಂಖ್ಯಾತರಲ್ಲಿ ಬಹಿರಂಗ ಕ್ಷಮೆ ಯಾಚಿಸಲಿ: ನೌಶಾದ್ ಮಲಾರ್

ದಿನೇಶ್ ಗುಂಡೂರಾವ್ ಅಲ್ಪಸಂಖ್ಯಾತರಲ್ಲಿ ಬಹಿರಂಗ ಕ್ಷಮೆ ಯಾಚಿಸಲಿ: ನೌಶಾದ್ ಮಲಾರ್


ಉಳ್ಳಾಲ: ಬಂಟ್ವಾಳದಲ್ಲಿ ಕೊಲೆಯಾಗಿರುವ ಅಬ್ದುಲ್ ರಹಿಮಾನ್ ಅವರ ಮೇಲೆ ಯಾವುದೇ ಕೇಸುಗಳಿಲ್ಲದಿದ್ದರೂ ಹಳೆಯ ವೈಷಮ್ಯದಿಂದ ಕೊಲೆ ನಡೆದಿದೆ ಎಂದು ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಲ್ಪಸಂಖ್ಯಾತರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಮುಸ್ಲಿಂ ಯೂತ್ ಲೀಗ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ ಆಗ್ರಹಿಸಿದರು.

ತೊಕ್ಕೊಟ್ಟಿನ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರದಂದು ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಗೃಹಚಾರ ಹಿಡಿದ ಗೃಹಮಂತ್ರಿ, ಜಿಲ್ಲೆಗೆ ಮದುಮಗನಂತೆ ಬಂದು ಹೋಗುವ ಉಸ್ತುವಾರಿ ಸಚಿವರ ಮೇಲೆ ಅಲ್ಪ ಸಂಖ್ಯಾತರಿಗೆ ಇನ್ನು ಭರವಸೆ ಉಳಿದಿಲ್ಲ. ಜಿಲ್ಲಾಡಳಿತ,ಪೊಲೀಸ್ ಇಲಾಖೆಯ ವೈಫಲ್ಯದಿಂದ ಬಂಟ್ವಾಳದ ಅಮಾಯಕ ಯುವಕ ಅಬ್ದುಲ್ ರಹ್ಮಾನ್ ಕೊಲೆ ನಡೆದಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ಅಲ್ಪ ಅಂಖ್ಯಾತರು ಭರವಸೆ ಇಟ್ಟರೂ ಸರಕಾರ ಮಾತ್ರ ನಮಗೆ ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಮಂಗಳೂರಲ್ಲಿ ವಯನಾಡಿನ ಅಶ್ರಪ್ ಎಂಬ ಅಮಾಯಕ ಯುವಕನ ಮೇಲೆ ಗುಂಪೊಂದು ಹಲ್ಲೆಗೈದು ಕೊಲೆ ಮಾಡಿತ್ತು. ಇದೀಗ ಮತ್ತೊಬ್ಬ ಅಮಾಯಕ ಅಲ್ಪ ಸಂಖ್ಯಾತ ಯುವಕನನ್ನು ಕೊಲೆಯಾಗಿದೆ. ಜಿಲ್ಲೆಯಲ್ಲಿ ಪುಂಡಾಟಿಕೆ ನಡೆಸುವವರನ್ನ ನಿಯಂತ್ರಿಸಲು ರಾಜ್ಯದ ಕಾಂಗ್ರೆಸ್ ಸರಕಾರ ವಿಫಲವಾಗಿದೆ. ಮುಸ್ಲಿಮರ ಮಾತುಗಳನ್ನು ಪಡೆದು ಅಧಿಕಾರ ಗಿಟ್ಟಿಸಿದ ಕಾಂಗ್ರೆಸ್ ಸರಕಾರದಿಂದ ಹತ್ತು ಶೇಕಡದಷ್ಟು ಮುಸ್ಲಿಮರನ್ನ ರಕ್ಷಿಸಲು ಸಾಧ್ಯವಾಗಿಲ್ಲ. ರಾಜ್ಯ ಸರಕಾರವು ಅಶ್ರಫ್ ವಯನಾಡು ಮತ್ತು ಅಬ್ದುಲ್ ರಹ್ಮಾನ್ ಅವರ ಕುಟುಂಬಕ್ಕೆ ತಕ್ಷಣವೇ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಮುಸ್ಲಿಂ ಯೂತ್ ಲೀಗ್‌ನ ಜಿಲ್ಲಾ ಕಾರ್ಯದರ್ಶಿ ಹಿದಾಯತ್ತುಲ್ಲಾಹ್ ಮಾರಿಪಳ್ಳ ಮಾತನಾಡಿ, ನಿರಂತರ ಅಲ್ಪಸಂಖ್ಯಾತರ ಮೇಲೆ ದಾಳಿಗಳಾಗುತ್ತಿದ್ದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಪ ಸಂಖ್ಯಾತರು ಹಗಲು ರಾತ್ರಿ ದುಡಿದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಮಾಡಿದ್ದ ದ್ವೇಷ ಭಾಷಣವು ಜಾಲತಾಣಗಳಲ್ಲಿ ಹರಿದಾಡಿತ್ತು.ಇದಕ್ಕೆ ಪ್ರತಿಯಾಗಿ ನಂ.೧ ಶಾಸಕರೆನಿಸಿರುವ ಯು.ಟಿ.ಖಾದರ್ ಅವರು ಯಾವುದೋ ಪ್ರಾಣಿ ಕಚ್ಚುತ್ತದೆಂದು ನಾವು ಅದಕ್ಕೆ ತಿರುಗಿ ಕಚ್ಚಲಾಗುತ್ತದೆಯೇ ಎಂದು ಮಾಧ್ಯಮ ಹೇಳಿಕೆ ನೀಡುತ್ತಾರೆಂದರೆ ಕಾಂಗ್ರೆಸ್‌ಗೆ ಮತ ನೀಡಿದ ನಾವು ಪಶ್ಚಾತ್ತಾಪ ಪಡೆಯಲೇಬೇಕು. ಕಚ್ಚುವ ಪ್ರಾಣಿಗಳನ್ನು ಸೂಕ್ತ ಜಾಗದಲ್ಲಿ ಕೂಡಿ ಹಾಕುವ ಕೆಲಸವನ್ನು ಸರಕಾರ ಮಾಡಬೇಕಲ್ಲವೆ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ನಡೆದ ರೌಡಿಶೀಟರ್ ಕೊಲೆಯನ್ನೂ ನಾವು ಖಂಡಿಸುತ್ತೇವೆ. ದುಷ್ಕರ್ಮಿಗಳನ್ನು ದಂಡಿಸಲೆಂದೇ ಕಾನೂನು ಇದೆ. ಅಲ್ಪ ಸಂಖ್ಯಾತರಿಗೆ ಪಕ್ಷದ ಕೊರತೆ ಇಲ್ಲ.ಪರ್ಯಾಯ ಪಕ್ಷವನ್ನು ರಚಿಸಿ ಅಧಿಕಾರ ಮಾಡಲು ಮುಸ್ಲಿಮರಿಗೆ ಗೊತ್ತಿದೆ. ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಿಂದಲೇ ಅಲ್ಪ ಸಂಖ್ಯಾತರ, ದಮನಿತರ ಪರವಾಗಿದೆ ಎಂಬುವ ಕಾರಣಕ್ಕಾಗಿ ನಾವು ಕಾಂಗ್ರೆಸ್ ಜೊತೆ ಇದ್ದೇವೆ. ಪ್ರಚೋದನಾಕಾರಿ ಭಾಷಣ ಮಾಡುವ ಭರತ್ ಕುಮ್ಡೇಲ್, ಶರಣ್ ಪಂಪ್ವೆಲ್ ನಂತವರನ್ನು ಜೈಲಿಗಟ್ಟಿದರೆ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯ. ಇನ್ನು ಮುಂದೆ ಅಮಾಯಕರ ಕೊಲೆ ನಡೆಯಬಾರದೆಂದರೆ ಇಲ್ಲಿ ಸಂಘ ಪರಿವಾರವನ್ನು ನಿಷೇಧಿಸಬೇಕು. ಇವೆಲ್ಲವನ್ನು ಮಾಡಲು ರಾಜ್ಯ ಸರಕಾರಕ್ಕೆ ಆಗಲ್ಲವೆಂದರೆ ಅಲ್ಪಸಂಖ್ಯಾತರು ಕಾಂಗ್ರೆಸಲ್ಲಿ ಇರುವುದಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.

ಗೃಹ ಇಲಾಖೆ ಮತ್ತು ಪೊಲೀಸರ ವೈಫಲ್ಯದಿಂದ ಜಿಲ್ಲೆಯಲ್ಲಿ ಕೊಲೆಗಳು ನಡೆದಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ನಮಗೆ ಬದುಕುವ ಭಾಗ್ಯ ಕೊಡಿ. ಬೇರೆ ಯಾವ ಬಿಟ್ಟಿ ಭಾಗ್ಯಗಳೂ ನಮಗೆ ಬೇಡ. ಸಮಾಜದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಕ್ರಿಮಿಗಳನ್ನು ಬಂಧಿಸಲು ನಾವು ವಿಧಾನಸಭಾ ಚಲೋ ಆಂದೋಲನ ಮಾಡಬೇಕೇ ಎಂದು ಪ್ರಶ್ನಿಸಿದ ಅವರು, ಅಲ್ಪ ಸಂಖ್ಯಾತರು ದುಷ್ಕೃತ್ಯ ಎಸಗಿದರೆ 24 ಗಂಟೆಯೊಳಗೆ ಪೊಲೀಸರು ಬಂಧಿಸುತ್ತಾರೆ.ಸುಹಾಸ್ ಶೆಟ್ಟಿ ಕೊಲೆಯಾದ ಸಂದರ್ಭ ಬಜರಂಗದಳದ ಶರಣ್ ಪಂಪ್ವೆಲ್ ನೀಡಿದ್ದ ಜಿಲ್ಲಾ ಬಂದ್ ಕರೆಯಿಂದಾಗಿ ಜಿಲ್ಲೆಯ ಹಲವೆಡೆ ಇರಿತಗಳಾಗಿತ್ತು.ಆದರೆ ಶರಣ್ ಪಂಪ್ವೆಲ್ ಸಂಜೆ 7 ಗಂಟೆಗೆ ಬಂಧನವಾದರೆ ರಾತ್ರಿ 8.30 ಗಂಟೆಗೆ ಬಿಡುಗಡೆಯಾಗುತ್ತದೆ. ಸರಕಾರದ ಈ ಧೋರಣೆಯ ವಿರುದ್ಧ ಅಲ್ಪಸಂಖ್ಯಾತ ಕಾಂಗ್ರೆಸಿಗರ ಸಾಮೂಹಿಕ ರಾಜೀನಾಮೆಯು ರಾಜ್ಯಕ್ಕೆ ಮಾದರಿಯಾಗಬೇಕಾಗಿದೆ ಎಂದರು.

ಮುಸ್ಲಿಂ ಯೂತ್ ಲೀಗ್‌ನ ರಾಜ್ಯ ಸಮಿತಿ ಸದಸ್ಯರಾದ ಶಬೀರ್ ತಲಪಾಡಿ, ಜಿಲ್ಲಾಧ್ಯಕ್ಷರಾದ ಹನೀಫ್ ಕುಂಜತ್ತೂರು, ಸದಸ್ಯರಾದ ಅಹಮ್ಮದ್ ಪೆರಿಬೈಲ್, ಹನೀಫ್ ಎಸ್.ಬಿ. ಉಚ್ಚಿಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article