
ಅಡಿಕೆ ವ್ಯಾಪಾರಿ ಪರಾರಿ, ಐವತ್ತಕ್ಕೂ ಅಧಿಕ ಕೃಷಿಕರಿಗೆ 10 ಕೋ. ರೂ. ವಂಚನೆ ಆರೋಪ
Tuesday, June 10, 2025
ಬಂಟ್ವಾಳ: ಇಲ್ಲಿನ ಮಾರ್ಕೆಟ್ ರಸ್ತೆಯ ಬಡ್ಡಕಟ್ಟೆ ಎಂಬಲ್ಲಿ ಎ.ಬಿ. ಸುಪಾರಿ ಅಂಗಡಿಯನ್ನು ಹೊಂದಿದ್ದ ನಾವೂರು ಗ್ರಾಮದ ಮೈಂದಾಳ ನಿವಾಸಿ ನೌಫಾಲ್ ಎಂಬಾತ ಕೃಷಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದು, ಐವತ್ತಕ್ಕೂ ಅಧಿಕ ಕೃಷಿಕರು ತಮ್ಮ ಹಣಕ್ಕಾಗಿ ಬಂಟ್ವಾಳ ನಗರ ಠಾಣೆಯ ಕದತಟ್ಟಿದ್ದಾರೆ.
ಸ್ಥಳೀಯ ಕೃಷಿಕರ ವಿಶ್ವಾಸಾರ್ಹ ವರ್ತಕನಾಗಿದ್ದ ನೌಫಾಲ್ ಜೊತೆಗೆ ಇಲ್ಲಿನ ಕೃಷಿಕರು ಎರಡು ಮೂರು ದಶಕಗಳಿಂದ ವ್ಯವಹಾರ ನಡೆಸುತ್ತಿದ್ದರು, ಒಣ ಅಡಿಕೆಯನ್ನು ನೀಡುತ್ತಿದ್ದರು. ಈವರೆಗೂ ತನ್ನ ವ್ಯವಹಾರದ ಮೂಲಕ ಕೃಷಿಕರ ಮನ ಗೆದ್ದಿದ್ದಲ್ಲದೆ ಕೃಷಿಕರಿಗೆ ಅಗತ್ಯಕ್ಕೆ ತಕ್ಕಂತೆ ಹಣವೂ ನೀಡುತ್ತಿದ್ದ.
ಸ್ಥಳೀಯ ಕೃಷಿಕರ ಮನೆ, ಮನೆಗೆ ತೆರಳಿ ಅಡಿಕೆ ಸಂಗ್ರಹಿಸಿ ಬಳಿಕ ಬಂಟ್ವಾಳ ಬಡ್ಡಕಟ್ಟೆಯಲ್ಲಿರುವ ದಾಸ್ತಾನಿನಲ್ಲಿ ಶೇಖರಿಸಿಡುತ್ತಿದ್ದ. ಆದರೆ ಇದೀಗ ಏಕಾಏಕಿ ಮೊಬೈಲ್ ಸ್ವಿಚ್ ಆಫ್ ಮಾಡಿ, ಅಂಗಡಿಗೆ ಬೀಗ ಹಾಕಿ ಪರಾರಿಯಾಗಿದ್ದು ಸ್ಥಳೀಯ ಕೃಷಿಕರ ಆತಂಕಕ್ಕೆ ಕಾರಣವಾಗಿದೆ. ಒಬ್ಬೊಬ್ಬ ಕೃಷಿಕನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದು, ಒಟ್ಟು ಮೊತ್ತ ಹತ್ತು ಕೋಟಿ ರೂಪಾಯಿ ವಂಚಿಸಿರುವುದಾಗಿ ಅಡಿಕೆ ವ್ಯಾಪಾರಿ ನೌಫಾಲ್ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.
ಸ್ಥಳೀಯ ಕೃಷಿಕ ಮಹಿಳೆಯೊಬ್ಬರು ತಮ್ಮ ಬ್ಯಾಂಕ್ ಸಾಲದ ಪಾವತಿ ಮೊತ್ತದ ಹಿನ್ನೆಲೆಯಲ್ಲಿ ಅಡಿಕೆ ವ್ಯಾಪಾರಿ ಬಳಿ ಹಣಕ್ಕಾಗಿ ಹೋದಾಗ ಆತ ಪರಾರಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈತನಿಂದ ವಂಚನೆಗೊಳಗಾದ ಕೃಷಿಕರು ಸೋಮವಾರ ತಂಡೋಪತಂಡವಾಗಿ ಬಂಟ್ವಾಳ ನಗರ ಠಾಣೆಯ ಮುಂದೆ ಜಮಾಯಿಸಿದ ವಿದ್ಯಮಾನವು ನಡೆಯಿತು. ಈ ಬಗ್ಗೆ ಪ್ರಕರಣ ದಾಖಲಿಸಿರುವ ಬಂಟ್ವಾಳ ನಗರ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.