
ಟೋಲ್ ವಿರುದ್ಧ ಹೋರಾಟ: ಜೂ.12 ರಂದು ಸಮಾಲೋಚನಾ ಸಭೆ
ಬಂಟ್ವಾಳ: ಅವೈಜ್ಞಾನಿಕ, ವಿವಾದಿತವಾದ ರಾಷ್ಟ್ರೀಯ ಹೆದ್ದಾರಿಯ ಬ್ರಹ್ಮರಕೊಟ್ಲು ಟೋಲ್ ಕೇಂದ್ರವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ
ಹೋರಾಟಕ್ಕೆ ಸಿದ್ದತೆ ನಡೆಯುತ್ತಿದ್ದು, ಜೂ.12 ರಂದು ಬೆಳಗ್ಗೆ 10 ಗಂಟೆಗೆ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್‌ನಲ್ಲಿ ಸಮಾಲೋಚನೆ ಸಭೆ ನಡೆಯಲಿದೆ ಎಂದು ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ಸಮಾನಮನಸ್ಕರು ಸೇರಿಕೊಂಡು ‘ಟೋಲ್ ಹಠಾವೋ’ ಬೃಹತ್ ಹೋರಾಟವನ್ನು ಮಾಡಲು ಉದ್ದೇಶಿಸಿದ್ದು, ಇದರ ಪೂರ್ವಭಾವಿಯಾಗಿ ಈ ಸಭೆಯನ್ನು ಕರೆಯಲಾಗಿದ್ದು, ಸಮಾನಮನಸ್ಕರು ಸಭೆಯಲ್ಲಿ ಭಾಗವಹಿಸಿ ಹೋರಾಟದ ರೂಪುರೇಷೆಯನ್ನು ಮಾಡುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡುವಂತೆ ಅವರು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅವೈಜ್ಞಾನಿಕ ರೀತಿಯಲ್ಲಿ ನಿತ್ಯ ವಿವಾದದ ಕೇಂದ್ರವಾಗಿರುವ ಬ್ರಹ್ಮರಕೊಟ್ಲು ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಬೇಕು, ಈ ಟೋಲ್ ಕೇಂದ್ರ ನಿಯಮಾನುಸಾರವಾಗಿ ಇದೆಯೋ ಎಂಬುದರ ಬಗ್ಗೆ ಅವರು ಮಾಹಿತಿ ನೀಡಬೇಕಾಗಿದೆ. ಯಾವುದೇ ಮೂಲಭೂತವಾದ ಸೌಕರ್ಯಗಳನ್ನು ಒದಗಿಸದೆ ಕೇವಲ ಹಣ ಮಾಡುವ ದುರುದ್ದೇಶದಿಂದ ಬಲವಂತವಾಗಿ ಜನಸಾಮಾನ್ಯರಿಂದ ಹಣ ವಸೂಲು ಮಾಡುವಂತೆ ಭಾಸವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.