
ಬಂಟ್ವಾಳ: 39 ಗ್ರಾ.ಪಂ. ಹಾಗೂ ಒಂದು ಪುರಸಭೆಯ ಮುಂಭಾಗ ಜೂ.23 ರಂದು ಪ್ರತಿಭಟನೆ
ಬಂಟ್ವಾಳ: ಕರ್ನಾಟಕ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ 39 ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ಪುರಸಭಾ ಕಚೇರಿ ಮುಂಭಾಗದಲ್ಲಿ ಜೂ.23 ರಂದು ಬೆಳಗ್ಗೆ ಗಂಟೆ 10 ಗಂಟೆಗೆ ಬಿಜೆಪಿ ಬಂಟ್ವಾಳ ಮಂಡಲದ ಆಶ್ರಯದಲ್ಲಿ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಯಲಿದೆ ಎಂದು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾಗೂ ಬಿಜೆಪಿ ಬಂಟ್ವಾಳ ಮಂಡಲದ ಅದ್ಯಕ್ಷರಾದ ಆರ್. ಚೆನ್ನಪ್ಪ ಕೊಟ್ಯಾನ್ ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯ ಬಳಿಕ ರಾಜ್ಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು, ಪ್ರತಿಭಟನೆಯ ಯಶಸ್ವಿಗಾಗಿ ಕೇತ್ರದ ಪ್ರತೀ ಗ್ರಾಮ ಪಂಚಾಯತ್ ಮತ್ತು ಪುರಸಭೆ ಸೇರಿದಂತೆ ಒಟ್ಟು 40 ಮಂದಿ ಪ್ರಮುಖರನ್ನಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
94ಸಿ ಹಕ್ಕು ಪತ್ರಗಳಿಗೆ ತಡೆ ಹಿಡಿದಿರುವ 9/11 ತಕ್ಷಣದಿಂದಲೇ ಕೈ ಬಿಟ್ಟು ಈ ಹಿಂದಿನ ಮಾದರಿಯಲ್ಲಿಯೇ ಒದಗಿಸಬೇಕು, ಬಡವರ ಅನಧಿಕೃತ ಕಟ್ಟಡಗಳಿಗೆ ನೀಡುತ್ತಿದ್ದ 11 ಬಿ ಖಾತೆಯನ್ನು ನೀಡದಂತೆ ಆದೇಶಿಸುವುದು, ಪ್ಲೋಟಿಂಗ್ ಆಗದೇ ಇರುವ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಮನೆ ನಂಬ್ರ ನೀಡುವುದನ್ನು ತಡೆ ಹಿಡಿದಿರುವುದು, ಕುಟುಂಬಸ್ಥರು ವಾಸ್ತವವಿದ್ದುಕೊಂಡು ಮನೆ ನಂಬ್ರ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ತಡೆ ಹಿಡಿದಿರುವುದು, ಗ್ರಾ.ಪಂ.ಗಳಲ್ಲಿ 9/11 ಪಡೆಯಬೇಕಾದರೆ ಲೇಔಟ್ ನಕ್ಷೆಗೆ ನಗರ ಮತ್ತು ಗ್ರಾಮಾಂತರ ಯೋಜನಾ ಕಛೇರಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆಯುವ ಬಗ್ಗೆ ಆದೇಶವನ್ನು ಹಿಂಪಡೆಯುವುದು, ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕಕ್ಕೆ ಕಾರ್ಮಿಕ ಇಲಾಖೆಯ ಪ್ರಮಾಣ ಪತ್ರ ಪಡೆಯಲು ಆದೇಶ ಹೊರಡಿಸಿರುವುದು, ಅಭಿವೃದ್ಧಿ ಕೆಲಸಗಳಿಗೆ ಅನುದಾನ ಒದಗಿಸದಿರುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಜನವಿರೋಧಿ ಮತ್ತು ಆಡಳಿತ ವಿರೋಧಿ ನೀತಿ ಖಂಡಿಸಿ ಈ ಪ್ರತಿಭಟನೆ ನಡೆಯಲಿದೆ.ಸಂತ್ರಸ್ತ ಫಲಾನುಭವಿಗಳು, ಸಾರ್ವಜನಿಕರು ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಅವರು ಜಂಟಿ ಪ್ರಕಟಣೆಯ ಮೂಲಕ ಕೋರಿದ್ದಾರೆ.