
ಬ್ರಹ್ಮರಕೊಟ್ಲು ಟೋಲ್ ಅವ್ಯವಸ್ಥೆ ಸರಿಪಡಿಸಲು ಸಂಸದರಿಗೆ ಮನವಿ ಸಲ್ಲಿಸಲು ನಿರ್ಧಾರ
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಬ್ರಹ್ಮರಕೊಟ್ಲುವಿನಲ್ಲಿರುವ ಅವೈಜ್ಞಾನಿಕ ಸುಂಕವಸೂಲಿ ಕೇಂದ್ರದ ಅವ್ಯವಸ್ಥೆಯನ್ನು ಸರಿಪಡಿಸಬೇಕು ಸೇರಿದಂತೆ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಸದರು, ಶಾಸಕರು ಹಾಗೂ ಹೆದ್ದಾರಿ ಇಲಾಖಾಧಿಕಾರಿಗಳಿಗೆ ಮನವಿ ನೀಡಲು ಗುರುವಾರ ಬಿ.ಸಿ. ರೋಡಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಯಿತು.
ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ನೇತೃತ್ವದಲ್ಲಿ ‘ಟೋಲ್ ಹಠಾವೋ’ ಹೋರಾಟಕ್ಕೆ ಸಂಬಂಧಿಸಿದಂತೆ ನಡೆದ ಸಮಾಲೋಚನೆ ಸಭೆ ಈ ನಿರ್ಧಾರ ಕೈಗೊಳ್ಳಲಾಯಿತು.
ಅವೈಜ್ಞಾನಿಕವಾಗಿರುವ ಈ ಟೋಲ್‌ನಲ್ಲಿ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಸ್ಥಳೀಯವಾಗಿ ನೊಂದಣಿ ಹೊಂದಿದ ಕೆಎ-19 ಮತ್ತು ಕೆಎ-70 ನೊಂದಾಯಿತ ವಾಹನಗಳಿಂದ ಸುಂಕ ವಸೂಲಿ ನಿಲ್ಲಿಸಬೇಕು, ಕೇಂದ್ರದಲ್ಲಿರುವ ಸಿಬ್ಬಂದಿಗಳ ಅನುಚಿತ ವರ್ತನೆಗೆ ಕಡಿವಾಣ ಹಾಕಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಈ ಬಗ್ಗೆ ಸಂಸದರು, ಶಾಸಕರನ್ನು ಭೇಟಿಯಾಗಿ ಅವರ ಮೂಲಕ ಈ ಬೇಡಿಕೆಯ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮನವಿಯನ್ನು ಮಾಡುವುದು ಇದಕ್ಕೆ ಇಲಾಖೆ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ಮಾಡಲಾಗುವುದೆಂದು ಎಂ. ತುಂಗಪ್ಪ ಬಂಗೇರ ಎಚ್ಚರಿಸಿದರು.
ಈ ಹಿನ್ನಲೆಯಲ್ಲಿ ಸಂಬಂಧಿಸಿದಂತೆ ಸಮಾನಮನಸ್ಕರನ್ನೊಳಗೊಂಡ ಹೋರಾಟ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಮಧುಕರ ಬಂಗೇರ ರಾಯಿ, ಕರುಣೇಂದ್ರ ಕೊಂಬ್ರಬೈಲ್, ಟಿ. ಹರೀಂದ್ರ ಪೈ, ಶಂಕರ ಶೆಟ್ಟಿ ಬೆದ್ರಮಾರ್, ಯಶೋಧರ ಶೆಟ್ಟಿ ದಂಡೆ, ಧನಂಜಯ ಶೆಟ್ಟಿ ಸರಪಾಡಿ, ಶಾಂತಪ್ಪ ಪೂಜಾರಿ ಹಟದಡ್ಕ, ಹರೀಶ್ ಶೆಟ್ಟಿ ನಯನಾಡು, ಜಿನೇಂದ್ರ ಜೈನ್ ವಗ್ಗ, ಪುಷ್ಪಾನಂದ ಮೂರ್ಜೆ, ಶ್ರೀನಿವಾಸ ಪೂಜಾರಿ ಸೇವಾ, ಗಿರೀಶ್ ಸಾಲ್ಯಾನ್ ಹೆಗ್ಡೆ ಬೆಟ್ಟು ಗುತ್ತು, ಕಿಶೋರ್ ಹಟತ್ತೋಡಿ ದಯಾನಂದ ರಾಯಿ ಉಪಸ್ಥಿತರಿದ್ದರು. ಪ್ರಭಾಕರ ಪಿ.ಎಂ. ಸ್ವಾಗತಿಸಿ, ವಂದಿಸಿದರು.