ಡಿಸಿ ಮನ್ನಾ ಭೂಮಿ: ಕಾನೂನಿಗೆ ತಿದ್ದುಪಡಿ ತಂದು ಭೂರಹಿತ ಪರಿಶಿಷ್ಟ ಸಮುದಾಯಕ್ಕೆ ಹಂಚಿ

ಡಿಸಿ ಮನ್ನಾ ಭೂಮಿ: ಕಾನೂನಿಗೆ ತಿದ್ದುಪಡಿ ತಂದು ಭೂರಹಿತ ಪರಿಶಿಷ್ಟ ಸಮುದಾಯಕ್ಕೆ ಹಂಚಿ


ಮಂಗಳೂರು: ರಾಜ್ಯ ಸರಕಾರ ಇಚ್ಚಾಶಕ್ತಿ ವ್ಯಕ್ತಪಡಿಸಿ ಮುಂದಿನ ಅಧಿವೇಶನದಲ್ಲಿ ಡಿಸಿ ಮನ್ನಾ ಭೂಮಿಯ ಮಂಜೂರಾತಿಗೆ ಸಂಬಂಧಿಸಿ ಕಾನೂನಿನಲ್ಲಿ ತಿದ್ದುಪಡಿ ತಂದು ಭೂರಹಿತ ಪರಿಶಿಷ್ಟ ಸಮುದಾಯಕ್ಕೆ ಭೂಮಿ ಹಂಚಿಕೆ ಮಾಡಲು ಕ್ರಮ ವಹಿಸಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡ ಎಂ.ದೇವದಾಸ್, ಡಿಸಿ ಮನ್ನಾ ಭೂಮಿಯ ಹಂಚಿಕೆಯು ಕಾನೂನಿನ ತೊಡಕಿನಿಂದ ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಒತ್ತಾಯಿಸುತ್ತಲೇ ಬರಲಾಗುತ್ತಿದೆ. ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರನ್ನು ಭೇಟಿಯಾಗಿ ಈ ಬಗ್ಗೆ ರ್ಚಿಸಿದಾಗ ಅವರು ದಲಿತ ನಾಯಕರ ಸಮಕ್ಷಮ ಜಿಲ್ಲಾಧಿಕಾರಿ ಸಭೆ ನಡೆಸಿ ಚರ್ಚಿಸಿದ್ದಾರೆ. ಇದು ದಲಿತ ಸಂಘಟನೆಗಳಿಗೆ ಆಶಾಯದಾಯಕ ಬೆಳವಣಿಗೆಯಾಗಿ ಕಂಡು ಬಂದಿದೆ ಎಂದರು. 

ಡಿಪ್ರೆಸ್ಟ್ ಕ್ಲಾಸ್ (ಡಿಸಿ) ಮನ್ನಾ ಭೂಮಿ ಅನ್ನುವ ಶಬ್ಧದಿಂದ ಕರೆಯಲ್ಪಡುವ ಭೂಮಿಗೆ ಸಂಬಂಧಿಸಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ವಿತರಣೆಗೆ ಸರಕಾರ ಮಟ್ಟದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಅದೇ ರೀತಿ ಕಾನೂನಿನಲ್ಲಿ ತಿದ್ದುಪಡಿ ತಂದು ಮಾತು ಉಳಿಸುವ ಕೆಲಸ ಮಾಡಲಿದ್ದೇವೆ ಎಂದು ಐವನ್ ಡಿಸೋಜಾ ಭರವಸೆ ನೀಡಿದ್ದಾರೆ ಎಂದವರು ಹೇಳಿದರು. 

1968ರ ಪಹಣಿಯಂತೆ ಜಿಲ್ಲೆಯಲ್ಲಿ 8,509.728 ಎಕರೆ ಡಿಸಿ ಮನ್ನಾ ಭೂಮಿ ಇತ್ತು. ಈ ಪೈಕಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 5,698.774 ಎಕರೆ ಭೂಮಿ ಮಂಜೂರಾಗಿದೆ. 625.254 ಎರೆ ಇತರರಿಗೆ ಮಂಜೂರಾಗಿದ್ದು, ಮೀಸಲು ಅರಣ್ಯ, ಗೇರು ಅಭಿವೃದ್ಧಿ ನಿಗಮ ಹಾಗೂ ಇತರ ಸಾರ್ವಜನಿಕ ಉದ್ದೇಶಗಳಿಗೆ 1,042.154 ಎಕರೆ ಭೂಮಿ ನೀಡಲಾಗಿದೆ. 997.195 ಎಕರೆ ಭೂಮಿ ಅತಿಕ್ರಮಣವಾಗಿದೆ. 8 ತಾಲೂಕುಗಳಲ್ಲಿ ಸದ್ಯ ಉಳಿಕೆಯಾದ ಭೂಮಿ (2024ರ ಡಿಸೆಂಬರ್ 24ರವರೆಗೆ) 190.26 ಎಕರೆಯಾಗಿದ್ದು, ಅದನ್ನು ಪರಿಶಿಷ್ಟ ಜಾತಿಯವರಿಗೆ ಹಂಚಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಇನ್ನಷ್ಟು ವಿಳಂಬ ವಹಿಸಿದರೆ ದಲಿತ ಸಂಘಟನೆಗಳು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದರು. 

ಉಜಿರೆ, ಮೂಡಬಿದ್ರೆ, ಅಳಿಕೆ, ಮುಡಿಪು ಮೊದಲಾದ ಪ್ರಮುಖ ಸ್ಥಳದಲ್ಲಿ ನೂರಾರು ಎಕರೆ ಭೂಮಿ ಖಾಸಗಿ ಶಿಕ್ಷಣ ಸಂಸ್ಥೆಗೆ ನೀಡಲಾಗಿದೆ. ಕೆಲವೊಂದು ಕಡೆ ಡಿಸಿ ಮನ್ನಾ ಭೂಮಿಯಲ್ಲಿ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮನೆ ಕಟ್ಟಿ ವಾಸ ಇರುವವರನ್ನು ಎಬ್ಬಿಸಲಾಗದು. ಆದರೆ ಅತಿಕ್ರಮಣ ಆಗಿರುವ ಜಾಗಕ್ಕೆ ಪರ್ಯಾಯವಾಗಿ ಒದಗಿಸುವ ಕಾರ್ಯವನ್ನು ಸರಕಾರ ಬದ್ಧತೆಯಿಂದ ಮಾಡಬೇಕು ಎಂಬುದು ನಮ್ಮ ಬೇಡಿಕೆ ಎಂದು ಮುಖಂಡರಾದ ಅಶೋಕ್ ಕೊಂಚಾಡಿ ಹೇಳಿದರು. 

ದಲಿತ ಸಂಘಟನೆಗಳ ಮುಖಂಡರಾದ ಎಸ್.ಪಿ. ಆನಂದ್, ರಮೇಶ್ ಕೋಟ್ಯಾನ್, ಚಂದ್ರಕುಮಾರ್, ಸುಧಾಕರ ಬೋಳೂರು, ಕಾಂಗ್ರೆಸ್ ಪ.ಜಾತಿ ಘಟಕದ ಜಿಲ್ಲಾ ಉಪಾಧ್ಯಕ್ಷ ಪ್ರೇಮ್ ಬಳ್ಳಾಲ್‌ಬಾಗ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article