
ಪುರಸಭೆಯಿಂದ ಮಳೆಹಾನಿ ತುರ್ತುಸ್ಪಂದನೆಗಾಗಿ ನಿಧಿ ಕಾದಿರಿಸುವಂತೆ ಸದಸ್ಯರ ಆಗ್ರಹ
ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಮಳೆಹಾನಿಗೊಳಗಾದ ಸಂತ್ರಸ್ಥರಿಗೆ ಕನಿಷ್ಠ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪುರಸಭೆಯಿಂದ ಸಾಧ್ಯವಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು,ಈ ನಿಟ್ಟಿನಲ್ಲಿ ಮಳೆಹಾನಿಗೆ ತುರ್ತು ಸ್ಪಂದನೆಗಾದರೂ ನಿಧಿಯನ್ನು ಕಾದಿರಿಸುವಂತೆ ಗುರುವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.
ಪುರಸಭಾಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ ಅವರು ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಮಹಮ್ಮದ್ ನಂದರಬೆಟ್ಟು ಅವರು ವಿಷಯ ಪ್ರಸ್ತಾವಿಸಿ, ಪುರಸಭಾ ವ್ಯಾಪ್ತಿಯ ಕೆಲವೆಡೆ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಪುರಸಭೆಯಿಂದ ಸಂತ್ರಸ್ಥರಿಗೆ ಕನಿಷ್ಠ ಪರಿಹಾರ ನೀಡಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ, ಪುರಸಭಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾನಿಯನ್ನು ಪರಿಶೀಲಿಸಿದರೆ ಸಾಲದು ಆ ಸಂದರ್ಭದಲ್ಲಿ ಹಣದ ರೂಪದಲ್ಲಿ ಸಂತ್ರಸ್ಥರಿಗೆ ತುರ್ತಾಗಿ ಸ್ಪಂದಿಸದಿದ್ದರೆ ಏನು ಪ್ರಯೋಜನ ಎಂದುಪ್ರಶ್ನಿಸಿದರು.
ಇಂತಹ ಸಂದರ್ಭದಲ್ಲಿ ತುರ್ತುಸ್ಪಂದನಕ್ಕಾಗಿ ಮಳೆಹಾನಿ ನಿಧಿಯೊಂದನ್ನು ಕಾದಿರಿಸುವಂತೆ ಅವರು ಆಗ್ರಹಿಸಿದರು. ಇದಕ್ಕೆ ಸದಸ್ಯ ಸಿದ್ದೀಕ್ ಧ್ವನಿಗೂಡಿಸಿದರು.
ವಿಪತ್ತು ನಿರ್ವಹಣಾ ಸಮಿತಿ ಏನು ಮಾಡುತ್ತಿದೆ:
ಬಂಟ್ವಾಳ ತಹಶೀಲ್ದಾರರ ನೇತೃತ್ವದಲ್ಲಿ ಇರುವ ವಿಪತ್ತು ನಿರ್ವಹಣಾ ಸಮಿತಿ ಏನು ಮಾಡುತ್ತಿದೆ.ಈ ಸಮಿತಿಯ ಖಾತೆಯಲ್ಲಿ ಮಳೆಹಾನಿಗಾಗಿ ಅನುದಾನ ಇದ್ದರೂ,ಹಾನಿಗೊಳಗಾದ ಸಂತ್ರಸ್ಥರಿಗೆ ತಕ್ಷಣಕ್ಕೆ ಪರಿಹಾರ ರೂಪದಲ್ಲಿ ಹಣ ನೀಡಲು ಯಾಕೆ ಸಾಧ್ಯವಾಗುತ್ತಿಲ್ಲ ಅಂದರೆ ಏನರ್ಥ? ನೆರೆ ಬಂದು ಗಂಜಿಕೇಂದ್ರಗಳನ್ನು ತೆರೆದರೆ ಅಲ್ಲಿನ ಖರ್ಚು-ವೆಚ್ಚವನ್ನು ಕೂಡ ಈ ವಿಪತ್ತು ನಿರ್ವಹಣಾ ಸಮಿತಿ ಪುರಸಭೆಯ ತಲೆಗೆ ಹೊರಿಸುತ್ತದೆ. ಸಮಿತಿಗೆ ಕೇಳುವವರು,ಹೇಳುವವರು ಯಾರು ಇಲ್ಲವೇ? ಎಂದು ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಯವರು ಈ ನಿಟ್ಟಿನಲ್ಲಿ ತಹಶೀಲ್ದಾರರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಆಲಡ್ಕಕ್ಕೆ ಶಾಶ್ವತ ಪರಿಹಾರ ಇಲ್ಲವೆ?:
ಪಾಣೆಮಂಗಳುಇರಿನ ಆಲಡ್ಕದಲ್ಲಿ ಪ್ರತಿ ಮಳೆಗೆ ಹತ್ತಕ್ಕು ಹೆಚ್ಚು ಮನೆಗಳು ಜಲಾವೃತಗೊಳ್ಳುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲವೆ ಎಂದು ಸದಸ್ಯ ಹರಿಪ್ರಸಾದ್ ಪ್ರಶ್ನಿಸಿದರು. ಅವರಿಗೆ ಪರ್ಯಾಯ ಜಮೀನಿನ ವ್ಯವಸ್ಥೆ ಮಾಡಲಾಗಿದೆಯೆಂಬ ಸುದ್ದಿ ಇದ್ದರೂ ಪ್ರತಿ ಮಳೆಗಾಲದಲ್ಲಿ ಆಲಡ್ಕದಲ್ಲಿ ವಾಸವಿದ್ದು, ಜಲಾವೃತಗೊಳ್ಳುತ್ತಿದ್ದಂತೆ ಸ್ಥಳಾಂತರಿಸುವ ಪ್ರಕ್ರಿಯೆ ಕಳೆದ 10 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದರೂ, ತಾಲೂಕಾಡಳಿತ ಇವರಿಗೊಂದು ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.ಇದಕ್ಕೆ ಮುಖ್ಯಾಧಿಕಾರಿಯಾಗಲೀ, ಅಧ್ಯಕ್ಷರಾಗಲಿ ಉತ್ತರ ನೀಡಲಿಲ್ಲ.
ಕತ್ತಲಲ್ಲಿ ಪುರಸಭೆ:
ಮಳೆಗಾಲ ಆರಂಭವಾದರೂ ಚರಂಡಿ ಇನ್ನು ಕ್ಲೀನ್ ಆಗಿಲ್ಲ, ದಾರಿದೀಪದ ವ್ಯವಸ್ಥೆಯು ಸರಿಇಲ್ಲದೆ ಇಡೀ ಪುರಸಭಾ ವ್ಯಾಪ್ತಿ ಕತ್ತಲಾವರಿಸಿದೆ ಇದು ಗಂಭೀರ ವಿಚಾರವಾಗಿದ್ದು, ಹೊರಜಿಲ್ಲೆಯಿಂದ ಸಾಕಷ್ಟು ಮಂದಿ ಇಲ್ಲಾಗಾಮಿಸುತ್ತಿದ್ದು, ಇಂತಹ ಕೆಟ್ಟ ಪರಿಸ್ಥಿತಿ ಇದ್ದರೆ ಪುರಸಭೆಗೆ ಮಾತ್ರವಲ್ಲ, ಆಡಳಿತಕ್ಕೂ ಕಪ್ಪು ಚುಕ್ಕೆ, ಒಟ್ಟಾರೆ ಕೆಲಸ ಮಾಡಿದವರ ಬಿಲ್ಲು ಕೊಡುವುದಿಲ್ಲ, ಹಾಗಾಗಿ ಸಮಸ್ಯೆಗಳು ಪರಿಹಾರ ಆಗುತ್ತಿಲ್ಲ ಎಂದು ಆಡಳಿತಪಕ್ಷದ ಸದಸ್ಯ ಲಕ್ಮಾನ್ ಅಸಮಾಧಾನ ವ್ಯಕ್ತಪಡಿಸಿದರು.
ದಾರಿದೀಪಕ್ಕೆ ಸಂಬಂಧಿಸಿ ಟೆಂಡರ್ ಪ್ರಕ್ರಿಯೆ ನಡೆಯದೆ ಹಲವು ವರ್ಷಗಳಾಗಿದ್ದು, ಅವರು ಗುಣಮಟ್ಟದ ವಿದ್ಯುದ್ದೀಪ ಅಳವಡಿಸುತ್ತಿಲ್ಲೆಂದು ಸದಸ್ಯರಾದ ಗೋವಿಂದಪ್ರಭು, ರಾಮಕೃಷ್ಣ ಆಳ್ವ, ಹರಿಪ್ರಸಾದ್ ದೂರಿದರು.
ಪೌರಕಾರ್ಮಿಕರಿಗೆ ದೊರೆಯದ ವೇತನ:
ಪೌರಕಾರ್ಮಿಕರಿಗೆ ಮೇ ತಿಂಗಳ ವೇತನ ಪಾವತಿಯಾಗದ ಬಗ್ಗೆ ಸದಸ್ಯ ಗೋವಿಂದ ಪ್ರಭು ಮುಖ್ಯಾಧಿಕಾರಿಯವರ ಗಮನಸೆಳೆದು, ಯಾವುದೇ ಕೆಲಸ ಆಗದಿದ್ದರೂ ತೊಂದರೆಯಿಲ್ಲ ನಿಗದಿತ ಸಮಯದಲ್ಲಿ ಅದ್ಯತೆಯಾಗಿ ಪರಿಗಣಿಸಿ ಪೌರಕಾರ್ಮಿರಿಗೆ ವೇತನ ವಿತರಿಸಬೇಕು ಎಂದು ಸೂಚಿಸಿದರು.
ರಾಜ್ಯದಾದ್ಯಂತ ತಾಂತ್ರಿಕ ಸಮಸ್ಯೆಯಿಂದ ಪೌರಕಾರ್ಮಿಕರಿಗೆ ವೇತನ ವಿತರಿಸುವಲ್ಲಿ ವಿಳಂಬವಾಗಿದೆ. ಇನ್ನೆರಡುದಿನದಲ್ಲಿ ಅವರ ವೇತನ ಪಾವತಿಸಲಾಗುತ್ತದೆ ಎಂದು ಮುಖ್ಯಾಧಿಕಾರಿ ನಜೀರ್ ಸಭೆಗೆ ತಿಳಿಸಿದರು.
ಯಂತ್ರ ಸರಿಪಡಿಸಲಾಗಿದೆ:
ಕಂಚಿನಡ್ಕಪದವಿನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಗೊಬ್ಬರವನ್ನಾಗಿಸುವ ಯಂತ್ರ ಕೆಟ್ಟು ಹೋಗಿರುವುದರಿಂದ ಗೊಬ್ಬರ ತಯಾರಿ ಸಾಧ್ಯವಾಗಿಲ್ಲ, ಇದೀಗ ಅದನ್ನು ಸರಿಪಡಿಸಲಾಗಿದ್ದು, ಮುಂದಿನವಾರದಿಂದ ಗೊಬ್ಬರ ತಯಾರಿ ಕಾರ್ಯ ನಡೆಯಲಿದೆ ಎಂದು ಮುಖ್ಯಾಧಿಕಾರಿ ನಜೀರ್ ಸಭೆಗೆ ಮಾಹಿತಿ ನೀಡಿದರು.
ಪುರಸಭಾ ವ್ಯಾಪ್ತಿಯಲ್ಲಿ ಏಕನಿವೇಶನ ಮತ್ತು ಹೊಸಖಾತೆ ತೆರೆಯುವ ವೇಳೆ ಪುರಸಭೆಯಿಂದ ಅಭಿವೃದ್ಧಿ ಶುಲ್ಕ ವಿಧಿಸುವ ಕುರಿತು ವಿಸ್ತೃತವಾದ ಚರ್ಚೆ ನಡೆಸುವ ನಿಟ್ಟಿನಲ್ಲಿ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದೆಂದು ನಿರ್ಧರಿಸಲಾಯಿತು.
ಶೋಕಾಸ್ ನೋಟೀಸಿಗೆ ಉತ್ತರ:
ಪುರಸಭಾ ವ್ಯಾಪ್ತಿಯ 6 ಕಡೆಗಳಲ್ಲಿ ತ್ಯಾಜ್ಯ ನೀರು ಸೇರುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಕಾರಣಕೇಳಿ ನೀಡಿರುವ ಶೋಕಾಸ್ ನೋಟೀಸ್ ನೀಡಿರುವ ಹಿನ್ನಲೆಯಲ್ಲಿ ಸ್ಥಳಪರಿಶೀಲನೆ ನಡೆಸಿ ಪುರಸಭೆಯಿಂದ ಸುಇಕ್ತವಾದ ಉತ್ತರ ನೀಡಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕವಾದ ಯುಜಿಡಿ, ಎಸ್‌ಟಿಪಿ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಸ್ತುತ 6 ಕಡೆಗಳಲ್ಲಿ ನೇತ್ರಾವತಿ ನದಿಗೆ ಕೊಳಚೆ ನೀರು ಸೇರಿತ್ತಿದೆ. ಈ ಆರುಕಡೆಗಳಲ್ಲಿ ಆಧುನಿಕ ರೀತಿಯಲ್ಲಿ ಎಸ್‌ಟಿಪಿ ನಿರ್ಮಿಸಿದಲ್ಲಿ ಬಹುತೇಕ ಸಮಸ್ಯೆ ಪರಿಹಾರವಾಗಲಿದೆ. ಈ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ತಹಶೀಲ್ದಾರರು, ಕೆಯುಡಬ್ಲ್ಯುಎಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕೂಡ ನಡೆಸಲಾಗಿದೆ ಎಂದು ಮುಖ್ಯಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಆರು ಕಡೆಗುರುತಿಸಲಾದ ಸ್ಥಳದಲ್ಲಿ ಎಸ್‌ಟಿಪಿ ನಿರ್ಮಿಸಲು ಜಮೀನಿನ ವ್ಯವಸ್ಥೆ ಇದೆಯಾ ಯುಜಿಡಿಗೆ ಅನುದಾನ ಕಾದಿರಿಸಿದ್ದರೂ ಸಮರ್ಪಕವಾದ ಜಮೀನು ಇಲ್ಲದಿದ್ದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
1 ಲಕ್ಷ ವರೆಗೆ ಅವಕಾಶ: ಪ್ರಸ್ತಾವನೆ
ಪುರಸಭೆಯ 1980ರ ಕಾಯ್ದೆಯಡಿ ಯಾವುದೇ ದುರಸ್ಥಿ ಕಾರ್ಯಕ್ಕೆ 10 ಸಾ.ರೂ. ಖರ್ಚು ಮಾಡಲು ಮುಖ್ಯಾಧಿಕಾರಿಗೆ ಅವಕಾಶವಿದ್ದು, ಇದನ್ನು 1 ರೂ.ವರೆಗೆ ವಿಸ್ತರಿಸುವ ನಿಟ್ಟಿನಲ್ಲಿ ಪ್ರಸ್ತಾವನೆಯೊಂದನ್ನು ಸರಕಾರಕ್ಕೆ ಸಲ್ಲಿಸುವುದು ಸೂಕ್ತ ಎಂದು ಮುಖ್ಯಾಧಿಕಾರಿ ನಜೀರ್ ಸದಸ್ಯರ ಗಮನಕ್ಕೆ ತಂದರಲ್ಲದೆ ಸರಕಾರ ಅವಕಾಶ ಮಾಡಿಕೊಟ್ಟರೆ ರಾಜ್ಯದ ಎಲ್ಲಾ ಪುರಸಭೆಗೂ ಅನುಕಾಲವಾಗಲಿದೆಯಲ್ಲದೆ ಇದು ಬಂಟ್ವಾಳ ಪುರಸಭೆಗೂ ಹೆಮ್ಮೆಯ ವಿಷಯವಾಗಲಿದೆ ಎಂದರು. ಇದಕ್ಕೆ ಸದಸ್ಯರು ಸಹಮತ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಮೊನೀಶ್ ಆಲಿ ಉಪಸ್ಥಿತರಿದ್ದರು. ಸದಸ್ಯರಾದ ರಾಮಕೃಷ್ಣ ಆಳ್ವ, ಹರಿಪ್ರಸಾದ್, ಮಹಮ್ಮದ್ ಶರೀಫ್, ಶಶಿಕಲಾ, ವಿದ್ಯಾವತಿ, ದೇವಕಿ ಮೊದಲಾದವರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಕಿರಿಯ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಮೆನೇಜರ್ ರಜಾಕ್, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಉಮಾವತಿ ಮೊದಲಾವರಿದ್ದರು.