
ಕೆರೆಯಲ್ಲಿ ಆಯತಪ್ಪಿ ನೀರಿಗೆ ಬಿದ್ದು ವಿದ್ಯಾರ್ಥಿ ಸಾವು
Saturday, June 7, 2025
ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದ ಕಾರಿಂಜ ದೇವಸ್ಥಾನದ ಗದಾ ತೀರ್ಥ ಕೆರೆಯಲ್ಲಿ ಕೈ, ಕಾಲು ತೊಳೆಯಲೆಂದು ಹೋದ ಕಾಲೇಜು ವಿದ್ಯಾರ್ಥಿಯೋರ್ವ ಆಯತಪ್ಪಿ ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.
ವಗ್ಗ ಕಾರಿಂಜ ಕ್ರಾಸ್ ಬಳಿಯ ಕಂಗಿತ್ತಿಲು ನಿವಾಸಿ ಶ್ರೀಧರ ಮೂಲ್ಯ ಅವರ ಪುತ್ರ, ಬಂಟ್ವಾಳ ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಚೇತನ್ (19) ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಚೇತನ್ ಪ್ರತಿ ಶನಿವಾರ ಕಾರಿಂಜ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ, ಈ ಶನಿವಾರವು ಅದೇ ರೀತಿ ಸ್ನೇಹಿತ ಪ್ರಶ್ವಿತ್‌ನ ಜೊತೆಗೆ ದೇವಸ್ಥಾನಕ್ಕೆ ತೆರಳಿದ್ದ. ಈ ವೇಳೆ ದೇವಾಲಯದ ಕೆರೆಯಲ್ಲಿ ಕಾಲು ತೊಳೆಯಲು ಮೆಟ್ಟಿಲು ಇಳಿಯುತ್ತಿದ್ದಂತೆ ಕಾಲು ಜಾರಿ ಕೆರೆಯೊಳಗೆ ಚೇತನ್ ಬಿದ್ದಿದ್ದಾನೆ.
ಜತೆಯಲ್ಲಿ ಇದ್ದ ಪ್ರಶ್ವಿತ್‌ಗೆ ಈಜು ತಿಳಿಯದ ಕಾರಣ ಆತ ಬೊಬ್ಬೆ ಹೊಡೆದು ಸ್ಥಳೀಯರನ್ನು ಕರೆದಿದ್ದಾನೆ. ಕೂಡಲೇ ಸ್ಥಳೀಯರು ಸೇರಿದ್ದು, ಶ್ರವಣ್ ಜೈನ್ ಹಾಗೂ ಉದಯ ಮಾಂಗಾಜೆ ಅವರು ಕೆರೆಗೆ ಇಳಿದು ಚೇತನ್‌ನನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ ಆದರೆ ಅದಾಗಲೇ ಚೇತನ್ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಕೇಸು ದಾಖಲಾಗಿದೆ.