
ಅಗರ್ದಬೈಲು-ಬಾಂಬಿಲ ಸಂಪರ್ಕಿಸುವ ಕಾಲು ಸಂಕದಲ್ಲಿ ಸಂಚಾರ ನಿಷೇಧ
ಬಂಟ್ವಾಳ: ತಾಲೂಕಿನ ಮೂಡುಪಡುಕೋಡಿ ಗ್ರಾಮದ ಅಗರ್ದಬೈಲು-ಬಾಂಬಿಲವನ್ನು ಸಂಪರ್ಕಿಸುವ ಕಾಲು ಸಂಕದಲ್ಲಿ ಪಾದಾಚಾರಿಗಳು ದಾಟದಂತೆ ಇರ್ವತ್ತೂರು ಗ್ರಾ.ಪಂ. ಬ್ಯಾನರ್ ಅಳವಡಿಸಿದೆ.
ಬಂಟ್ವಾಳ ತಾಲೂಕು ವಿಪತ್ತು ನಿರ್ವಹಣಾ ಸಮಿತಿ ಪರಿಶೀಲಿಸಿ, ಅಪಾಯಕಾರಿ ಈ ಸೇತುವೆಯ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸೂಚನೆಯಂತೆ ಮುನ್ನಚ್ಚೆರಿಕಾ ಕ್ರಮವಾಗಿ ಇರ್ವತ್ತೂರು ಗ್ರಾ.ಪಂ. ಬ್ಯಾನರ್ ಅಳವಡಿಸಿದೆ.
ಅಗರ್ದಬೈಲಿನ ಈ ಕಾಲು ಸಂಕ ಬಾಂಬಿಲ ಹೆದ್ದಾರಿಯನ್ನು ಸಂಪರ್ಕಿಸುವ ಸುಲಭ ಮಾರ್ಗ ಇದಾಗಿದ್ವಾದು, ಈ ಭಾಗದ ಬಹುತೇಕ ಗ್ರಾಮಸ್ಥರು,ವಿದ್ಯಾರ್ಥಿಗಳಿ ಈ ಕಾಲಸಂಕವನ್ನು ಬಳಸಿಕೊಳ್ಳುತ್ತಿದ್ದಾರೆ.ಇದೀಗ ನಿರಂತರವಾಗಿ ಸುರಿಯುವ ಮಳೆಯಿಂದಾಗಿ ತೋಡು, ಹಳ್ಳಗಳು ನೀರಿನಿಂದ ತುಂಬಿ ಅಪಾಯಕಾರಿಯಾಗಿ ಹರಿಯುತ್ತಿದ್ದು ಹಾಗಾಗಿ ನಾದುಸ್ಥಿತಿಯಲ್ಲಿರುವ ಅಗರ್ದಬೈಲು ಕಾಲು ಸಂಕದಲ್ಲಿ ಮುನ್ನಚ್ಚರಿಕಾ ಕ್ರಮವಾಗಿ ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಇಲ್ಲಿಗೆ ಸಂಪರ್ಕಿಸಲು ಪ್ರತ್ಯೇಕ ರಸ್ತೆಗಳಿದ್ದರೂ ಅದು ಸುತ್ತು ಬಳಸಿಕೊಂಡು ಹೋಗಬೇಕಾಗಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಈ ಕಾಲದಾರಿಯ ಮೂಲಕವೇ ಬಾಂಬಿಲ ಮೊದಲಾದೆಡೆಗೆ ಸಂಚರಿಸುತ್ತಿದ್ದಾರೆ.
ಇರ್ವತ್ತೂರು ಗ್ರಾ.ಪಂ.ನ ಈ ಎಚ್ಚರಿಕಾ ಫಲಕ ಇದೀಗ ಗ್ರಾಮಸ್ಥರು ಕಣ್ಣು ಕೆಂಪಾಗಿಸಿದ್ದು, ಗ್ರಾ.ಪಂ.ವಿರುದ್ಧ ಗ್ರಾಮಸ್ಥರು ವೀಡಿಯೋ ಮಾಡಿ ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಕಾಡಬೆಟ್ಟು ಹಾಗೂ ಮುಂಡಬೈಲು ಭಾಗದ ಜನರು, ವಿದ್ಯಾರ್ಥಿಗಳು ಬಾಂಬಿಲ ಮುಖ್ಯ ರಸ್ತೆಗೆ ಬರಲು ಇದೇ ಕಾಲು ಸಂಕವನ್ನು ಅಶ್ರಯಿಸಿದ್ದಾರೆ. ಈ ಕಾಲು ಸಂಕ ಸಂಪೂರ್ಣನಾದು ಸ್ಥಿತಿಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಸಂಕದ ಅಡಿಭಾಗದಲ್ಲಿ ಕಾಂಕ್ರೀಟ್ ಕಿತ್ತುಹೋಗಿ, ಕಬ್ಬಿಣದ ರಾಡ್‌ಗಳು ತುಕ್ಕುಹಿಡಿದಿರುವುದು ಕಂಡು ಬಂದಿದೆ. ಪಿಲ್ಲರ್‌ಗಳು ಕೂಡ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ವಿಡಿಯೋ ಮೂಲಕ ಗ್ರಾಮಸ್ಥರು ತಿಳಿಸಿದ್ದಲ್ಲದೆ ಗ್ರಾಮಪಂಚಾಯತ್ ನಿರ್ಲಕ್ಷ್ಯಕ್ಕೂ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕಾಲ ಸಂಕದಲ್ಲಿ ಸಂಚರಿಸದಂತೆ ನಿರ್ಬಂಧಿಸುವ ಮೊದಲು ಜನರಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿದ್ದೀರಾ ಎಂದು ಕೂಡ ಗ್ರಾಸ್ಥರು ವೀಡಿಯೋ ಮೂಲಕ ಪ್ರಶ್ನಿಸಿದ್ದಾರೆ.
ಪ್ರತಿ ಮಳೆಗಾಲದಲ್ಲಿಯು ಈ ಕಾಲು ಸಂಕದ ಮೇಲ್ಭಾಗದಲ್ಲೆ ನೀರು ಹರಿಯುತ್ತಿದೆ, ಆಗಿದ್ದು ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕಾಲುಸಂಕದ ಬಗ್ಗೆ ಗಮನಹರಿಸಿಲ್ಲ, ಇದಕ್ಕಿಂತ ಎತ್ತರದ ಮತ್ತು ವಾಹನ ಓಡಾಟಕ್ಕೆ ಅನುಕೂಲಕರವಾಗುವಂತೆ ಸೇತುವೆ ನಿರ್ಮಿಸಿಕೊಡುವಂತೆಯು ಗ್ರಾಮಸ್ಥರು ಆಗ್ರಹಿಸಿದ್ದಾರೆ.