
ಕಾಶಿಪಟ್ಣ ಶಾಲೆಯಲ್ಲಿ ತೆರವಿಗೆ ಬಾಕಿಯಾಗಿದ್ದ ಗೋಡೆ ಕುಸಿತ
Saturday, June 14, 2025
ಉಜಿರೆ: ಕಾಶಿಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ತೆರವಿನ ವೇಳೆ ತೆರವು ಮಾಡದೆ ಉಳಿಸಿದ್ದ ಗೋಡೆಯ ಒಂದು ಭಾಗ ಮಳೆಗೆ ಕುಸಿದು ಬಿದ್ದ ಘಟನೆ ಶನಿವಾರ ನಡೆದಿದೆ.
ಈ ಕೊಠಡಿಯನ್ನು ಸಂಪೂರ್ಣ ತೆರೆವುಗೊಳಿಸಲು ಶಿಕ್ಷಣ ಇಲಾಖೆ ಆದೇಶ ನೀಡಿತ್ತು. ಆದರೆ ಶಾಲಾಭಿವೃದ್ಧಿ ಸಮಿತಿಯವರು ಒಂದು ಭಾಗದ ಗೋಡೆಯನ್ನು ತೆರವುಗೊಳಿಸದೆ ಹಾಗೆ ಬಿಟ್ಟಿದ್ದರು. ಇಂದು ಮಳೆಗೆ ಕುಸಿದು ಬಿದ್ದಿದೆ. ಕುಸಿದು ಬಿದ್ದ ಸಮಯ ಸ್ಥಳದಲ್ಲಿ ಮಕ್ಕಳು ಯಾರೂ ಇರಲಿಲ್ಲವಾದ ಕಾರಣ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ. ಈ ಗೋಡೆಯ ಭಾಗದ ಸಮೀಪವಿದ್ದ ಬಿಸಿ ಊಟದ ಕೊಠಡಿಗೂ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.
ಸಂಪೂರ್ಣ ಕಟ್ಟಡದ ತೆರವಿಗೆ ಆದೇಶವಿದ್ದರೂ ಗೋಡೆಯ ಒಂದು ಭಾಗವನ್ನು ಯಾವ ಕಾರಣಕ್ಕಾಗಿ ಉಳಿಸಲಾಗಿತ್ತು ಎಂಬುದು ಯಕ್ಷಪ್ರಶ್ನೆಯಾಗಿದೆ. ಶಿಥಿಲ ಕಟ್ಟಡ, ಕೊಠಡಿಗಳನ್ನು ತೆರೆವುಗೊಳಿಸಲು ಶಿಕ್ಷಣ ಇಲಾಖೆ ಆದೇಶ ನೀಡುತ್ತದೆ. ಇದರ ತೆರವು ಕಾರ್ಯ ಶಾಲಾಭಿವೃದ್ಧಿ ಸಮಿತಿ ಸುಪರ್ದಿಯಲ್ಲಿ ನಡೆಯುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.