
ಪುಂಚಮೆ ದನದ ಹಟ್ಟಿಗೆ ಗುಡ್ಡ ಜರಿದು ಸಂಪುರ್ಣ ಹಾನಿ: ಜಾನುವಾರುಗಳು ಬಚಾವ್
Sunday, June 15, 2025
ಬಂಟ್ವಾಳ: ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಹೈನಿಗಾರಿಕೆ ನಡೆಸುತ್ತಿರುವ ಮಹಿಳೆಯೋರ್ವರ ದನದ ಹಟ್ಟಿಗೆ ಗುಡ್ಡ ಜರಿದುಬಿದ್ದು ಹಟ್ಟಿ ಸಂಪುರ್ಣ ಹಾನಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಎಂದಿನಂತೆ ಹಗಲಿನಲ್ಲಿ ಮೇಯಲು ಬಿಟ್ಟ ಹಸುಗಳು ಬಂದು ತನ್ನ ಹಟ್ಟಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವೇಳೆಯಲ್ಲಿ ಮಳೆಗೆ ಪಕ್ಕದ ಗುಡ್ಡ ಜರಿದು ದನದ ಹಟ್ಟಿಗೆ ಅಪ್ಪಳಿಸಿದ ಪರಿಣಾಮ ಸಂಪೂರ್ಣ ಕುಸಿದಿದೆ.
ಈ ಸಂದರ್ಭ ಮನೆಯ ಅಂಗಳದಲ್ಲಿದ್ದ ಏಳರಿಂದ ಎಂಟು ದನಗಳು ಪವಾಡ ಸದೃಶವಾಗಿ ಅಲ್ಪಸ್ವಲ್ಪ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದೆ.
ಹೈನುಗಾರ್ತಿ, ಪುಂಚಮೆ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿ ಸರೋಜಿನಿ ಎಂಬವರು ಹಲವು ವರ್ಷಗಳಿಂದ ಹೈನುಗಾರಿಕೆ ಮಾಡಿಕೊಂಡು ಬರುತ್ತಿದ್ದಾರೆ.
ಕೆಎಂಎಫ್ ಒಕ್ಕೂಟದ ಜಗದೀಶ್ ಅವರು ಒಕ್ಕೂಟದಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು. ಪುಂಚಮೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಾಮಾನ ಪೂಜಾರಿ ಹಾಗೂ ನಿರ್ದೇಶಕರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.