
ಬಂಟ್ವಾಳ: ಗುಡ್ಡಕುಸಿತ, ವಿವಿದೆಡೆ ಹಾನಿ
ಬಂಟ್ವಾಳ: ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ವಿವಿದೆಡೆಯಲ್ಲಿ ಗುಡ್ಡಕುಸಿತ, ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ತಾಲೂಕಿನ ಕಾವಳಪಡೂರು ಗ್ರಾಮದ ಆಲಂಪುರಿ ಎಂಬಲ್ಲಿ ರೇವತಿ ಅವರ ಮನೆಯ ಮುಂಭಾಗದಲ್ಲಿ ಆವರಣ ಗೋಡೆ ಹಾಗೂ ಬಾವಿ ಕುಸಿದಿದ್ದು, ಯಾವುದೇ ಹಾನಿಯಾಗಿರುವುದಿಲ್ಲ, ಮನೆ ಮಂದಿಯನ್ನು ಮುಮಕಜಾಗೃತಾ ಕ್ರಮವಾಗಿ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಕಾಡಬೆಟ್ಟು ಗ್ರಾಮದ ಮೇಗಿನಮನೆ ಎಂಬಲ್ಲಿನ ರಿಚಾರ್ಡ್ ಡಿ’ಸೋಜ ಅವರ ಪಕ್ಕಾ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿದೆ. ಅಮ್ಟಾಡಿ ಗ್ರಾಮದ ಬಾಂಬಿಲ ಎಂಬಲ್ಲಿ ಬಾಂಬಿಲ ಮತ್ತು ತಲೆಂಬಿಲ ಸಂಪರ್ಕಿಸುವ ಗ್ರಾಮ ಪಂಚಾಯತ್ ರಸ್ತೆಗೆ ಗುಡ್ಡ ಕುಸಿದಿದ್ದಲ್ಲದೆ ಸುಮಾರು೧೦ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಅರಳ ಗ್ರಾಮದ ಪಂಬದಗದ್ದೆಎಂಬಲ್ಲಿನ ದಿನಕರ ಎಂಬವರ ಮನೆಯ ಮೇಲೆ ಮಣ್ಣು ಬಿದ್ದು ಮನೆಯ ಗೋಡೆಗೆ ಹಾನಿಯಾಗಿರುತ್ತದೆ. ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ. ಮನೆಮಂದಿಯನ್ನು ಪಕ್ಕದ ಮನೆಗೆ ಸ್ಥಳಾಂತರ ಗೊಳಿಸಲಾಗಿದೆ. ವಿಟ್ಲ ಐಟಿಐ ಕಟ್ಟಡದ ಪಕ್ಕ ಗುಡ್ಡ ಜರಿಯುತ್ತಿರುವುದರಿಂದ ಐಟಿಐ ಕಟ್ಟಡ ಕುಸಿಯುವ ಭೀತಿಯಲ್ಲಿದೆ.
ಸೂರಿಕುಮೇರು ಸಮೀಪದ ದಾಸಕೋಡಿ ಎಂಬಲ್ಲಿ ವಾಸ್ತವ್ಯ ಇಲ್ಲದ ಮನೆಯೊಳಗೆ ನೀರು ನುಗ್ಗಿದೆ. ಮನೆಯ ಸುತ್ತಲೂ ನೀರು ಅವರಿಸಿ ಮುಕ್ಕಾಲುಭಾಗದಷ್ಟು ಮನೆ ಮುಳುಗಿದ ಸ್ಥಿತಿಯಲ್ಲಿದ್ದರೆ, ಬಾಳ್ತಿಲದಲ್ಲಿ ಬೆಳಗ್ಗೆ ಎರಡು ವಾಣಿಜ್ಯ ಸಂಕೀರ್ಣಗಳು ಜಲಾವೃತಗೊಂಡಿದ್ದು, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಗುತ್ತಿಗೆ ಸಂಸ್ಥೆ ಮಾಡಿರುವ ಅವಾಂತರದಿಂದ ಕಟ್ಟಡಗಳು ಜಲಾವೃತಗೊಳ್ಳಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗುತ್ತಿಗೆ ಕಂಪೆನಿಯವರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಕಟ್ಟಡ ಸಹಿತ ಕೃಷಿ, ತೋಟ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಈ ಪರಿಸರದಲ್ಲಿ ಕರೆಂಟ್ ಇಲ್ಲದೆ ಕತ್ತಲೆಯಲ್ಲಿರಬೇಕಾಗಿದೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಬೇಟಿ ನೀಡಿ ತಾತ್ಕಾಲಿಕ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದಾರೆ.