
ಉಕ್ಕಿನ ಸೇತುವೆಯಲ್ಲಿ ಘನವಾಹನಗಳು ಸಂಚರಿಸದಂತೆ ಕಬ್ಬಿಣದ ಗಾರ್ಡ್ ಅಳವಡಿಕೆ
ಬಂಟ್ವಾಳ: ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಘನವಾಹನಗಳು ಸಂಚರಿಸದಂತೆ ಶನಿವಾರ ಮತ್ತೆ ಕಬ್ಬಿಣದ (ತಡೆಬೇಲಿ) ಗಾರ್ಡ್ ಅಳವಡಿಸಲಾಗಿದೆ. ಕಳೆದ ಮಂಗಳವಾರ ಮೀನು ಸಾಗಾಟದ ವಾಹನ ಡಿಕ್ಕಿಯಾಗಿ ಮುರಿದು ಬಿದ್ದಿದ್ದ ಕಬ್ಬಿಣದ ಗಾರ್ಡನ್ನು ದುರಸ್ತಿ ಪಡಿಸಿ, ಪೈಂಟ್ ಬಳಿದು ಅಳವಡಿಸಲಾಗಿದೆ. ದುರ್ಬಲ ಗೊಂಡಿರುವ ಹಳೇ ಸೇತುವೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಭಂಧಗೊಳಿಸಿ ಬಂಟ್ವಾಳ ತಹಶೀಲ್ದಾರ್ ರ ಆದೇಶದ ನಡುವೆಯೇ ಬಂಟ್ವಾಳ ಪುರಸಭೆ ತಡೆಬೇಲಿ ದುರಸ್ತಿಪಡಿಸಿ ಅಳವಡಿಸಿ ಲಘುವಾಹನಗಳ ಸಂಚಾರಕ್ಕೆ ಅವಕಾಶ ನೀಡಿದೆ.
ಪಾಣೆಮಂಗಳೂರಿನ ಹಳೆಯ ಕಾಲದ ಉಕ್ಕಿನ ಸೇತುವೆ ಕಳೆದ ಒಂದು ವಾರದಿಂದ ಭಾರಿ ಸುದ್ದಿಯಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿರುವ ಈ ಉಕ್ಕಿನ ಸೇತವೆಯಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲಾತಾಣದಲ್ಲಿ ಕೆಲವು ಸಮಯದ ಹಿಂದೆ ಹರಡಿ ಸೇತುವೆಯಲ್ಲಿ ಘನವಾಹನಗಳ ಸಂಚಾರವನ್ನು ನಿಷೇಧಿಸುವ ಉದ್ದೇಶದಿಂದ 6.5 ಅಡಿ ಎತ್ತರಕ್ಕೆ ಕಬ್ಬಿಣದ ಗೇಟ್ ಅಳವಡಿಸಲಾಗಿತ್ತು. ನಿಯಮ ಮೀರಿ ಘನವಾಹನಗಳು ಸಂಚರಿಸಿದ ಪರಿಣಾಮ ತಡೆಬೇಲಿ ಹಿಗ್ಗಿಕೊಂಡು ಅಪಾಯಕಾರಿಯಾಗಿ ವಾಲಿ ನಿಂತಿತ್ತು.
ಈ ವಾಲಿ ನಿಂತಿದ್ದ ಕಬ್ಬಿಣದ ಗಾರ್ಡನ್ನು ತೆರವುಗೊಳಿಸಿ ಹೊಸ ಗಾರ್ಡ್ ಅಳವಡಿಸುವಂತೆ ಮಾಧ್ಯಮಗಳಲ್ಲಿ ವರದಿ ಪ್ರಕಟಿಸಿದರೂ ಪುರಸಭಾಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ. ಕಳೆದ ಮಂಗಳವಾರ ಮೀನು ಸಾಗಾಟದ ಪಿಕಪ್ ವಾಹನವೊಂದು ಈ ಕಬ್ಬಿಣದ ಗಾರ್ಡ್ ಡಿಕ್ಕಿಯಾಗಿ ಮುರಿದು ಬಿದ್ದಿತ್ತು. ಸೇತುವೆಯ ರಕ್ಷಣೆಯ ಉದ್ದೇಶದಿಂದ ಬುಧವಾರ ಈ ಸೇತುವೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಆದೇಶ ಹೊರಡಿಸಿದ್ದರು.
ಗುರುವಾರ ಬೆಳಗ್ಗೆ ಸಂಚಾರಿ ಪೊಲೀಸರು ಸೇತುವೆಗೆ ಬ್ಯಾರಿಕೇಡ್ ಇಟ್ಟು, ರಿಬ್ಬನ್ ಕಟ್ಟಿ ವಾಹನಗಳ ಸಂಚಾರ ನಿರ್ಬಂಧಿಸಿದ್ದರು. ಅದೇ ದಿನ ಬಂಟ್ವಾಳ ಪುರಸಭೆಯಲ್ಲಿ ಸಾಮಾನ್ಯ ಸಭೆ ನಡೆದಿದ್ದು, ಇದೇ ವಿಷಯಕ್ಕೆ ಸ್ಥಳೀಯ ಸದಸ್ಯ ಇದ್ರೀಸ್ ಸಭೆ ಬಹಿಷ್ಕರಿಸಿ ಹೊರ ನಡೆದಿದ್ದರೆ ಸಿದ್ದೀಕ್ ಗುಡ್ಡೆಯಂಗಡಿ ಬಂದ್ ತೆರವು ಮಾಡುವಂತೆ ಸಭೆಯಲ್ಲಿ ಪಟ್ಟು ಹಿಡಿದಿದ್ದರು. ಈ ಇಬ್ಬರು ಪುರಸಭಾ ಸದಸ್ಯರ ಉಪಸ್ಥಿತಿಯಲ್ಲಿ ಮಧ್ಯಾಹ್ನದ ವೇಳೆಗೆ ಸಾರ್ವಜನಿಕರು ಸೇತುವೆಗೆ ಅಡ್ಡಕಟ್ಟಿದ ರಿಬ್ಬನ್ ಹಾಗೂ ಬ್ಯಾರಿಕೇಡ್ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಪಾಣೆಮಂಗಳೂರಿನಲ್ಲಿ ದೇವಸ್ಥಾನ, ಮಸೀದಿ, ಶಾಲೆ, ಅಂಗಡಿ, ಮೀನು ಮಾರುಕಟ್ಟೆಗಳು ಇರುವುದಲ್ಲದೆ ಆಲಡ್ಕ, ನಂದಾವರ, ಸಜೀಪ, ಮಾರ್ನಬೈಲು, ಪಣೋಲಿಬೈಲು ಮತ್ತಿತರ ಕಡೆಗಳಿಗೆ ಹೋಗಲು ಸುಲಭದ ದಾರಿಯಾಗಿರುವುದರಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಯಥಾಸ್ಥಿತಿ ಕಾಪಾಡಬೇಕು ಎಂದು ಪುರಸಭಾ ಸದಸ್ಯರು ಆಗ್ರಹಿಸಿದ ಹಿನ್ನಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಮುರಿದು ಬಿದ್ದಿದ್ದ ಕಬ್ಬಿಣದ ಗೇಟನ್ನೇ ದುರಸ್ತಿ ಪಡಿಸಿ ಅಳವಡಿಸಿದ್ದಾರೆ.
ಹಳೆಯ ಕಾಲದ ಸೇತುವೆ ದುರ್ಬಲವಾಗಿರುವುದರಿಂದ ವಾಹನ ಸಂಚಾರ ಸುರಕ್ಷಿತವಲ್ಲ. ಮಳೆಗಾಲ ಮುಗಿದ ಬಳಿಕ ಸೇತುವೆಯ ಧಾರಣ ಸಾಮರ್ಥ್ಯವನ್ನು ಪರೀಕ್ಷಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡೋಣ. ಅಲ್ಲಿಯವರೆಗೆ ಸೇತುವೆಯಲ್ಲಿ ತಾತ್ಕಲಿಕವಾಗಿ ವಾಹನ ಸಂಚಾರ ನಿರ್ಭಂದ ಎನ್ನುವ ತಾಲೂಕು ದಂಡಾಧಿಕಾರಿಯವರ ಆದೇಶ ಜಾರಿಯಲ್ಲಿದ್ದರೂ ಪುರಸಭಾಧಿಕಾರಿಗಳು ಅದನ್ನು ಪರಿಗಣಿಸದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಏನು ಕ್ರಮ?
ಸೇತುವೆಯಲ್ಲಿ ಯಾವ ವಾಹನಗಳ ಸಂಚಾರ ನಿಷೇಧವಿದೆ ಎನ್ನುವ ಬಗ್ಗೆ ಸೂಚನಾ ಫಲಕಗಳನ್ನು ಈ ದಾರಿಯಲ್ಲಿ ಪುರಸಭೆ ಎಲ್ಲೂ ಹಾಕಿಲ್ಲ. ಕಬ್ಬಿಣದ ಗಾರ್ಡ್ ಮೇಲೆ ವಾಹನ ಚಾಲಕರಿಗೆ ಕಾಣುವಂತೆ ರಿಫ್ಲೆಕ್ಟರ್‌ಗಳನ್ನು ಅಳವಡಿಸಿರಲಿಲ್ಲ. ಇನ್ನು ಮುಂದೆಯೂ ಅದೇ ರೀತಿಯಾದರೆ ಮತ್ತೆ ಹಳೆಯ ಸಮಸ್ಯೆಗಳು ಪುನಾರವರ್ತನೆಯಾಗಲಿದೆ. ಕಬ್ಬಿಣದ ಗಾರ್ಡ್ ಹಾನಿಗೊಳಿಸುವವರಿಗೆ ಏನು ಕ್ರಮ? ಎನ್ನುವ ಪ್ರಶ್ನೆಯು ಹುಟ್ಟಿಕೊಂಡಿದೆ.