
ತೆಂಕುತಿಟ್ಟಿನ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ ಇನ್ನಿಲ್ಲ
Sunday, June 8, 2025
ಬೆಳ್ತಂಗಡಿ: ತೆಂಕುತಿಟ್ಟಿನ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67) ಅವರು ಜೂ.7 ರಂದು ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.
ಕಟೀಲು ಮೇಳದಲ್ಲಿ ಕಳೆದ 20 ವರ್ಷಗಳಿಂದ ವೇಷಧಾರಿಯಾಗಿ, ೩ನೇ ಮೇಳದ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದರು.
ಧರ್ಮಸ್ಥಳ, ಕರ್ನಾಟಕ, ಸಸಿಹಿತ್ಲು ಮೇಳಗಳಲ್ಲಿ ತುಳು-ಕನ್ನಡ ಪ್ರಸಂಗಗಳಲ್ಲಿ ಎಲ್ಲ ಸ್ವರೂಪದ ಪಾತ್ರಗಳನ್ನು ನಿರ್ವಹಿಸಿದ್ದರು. ವಿದ್ಯುನ್ಮತಿ ಕಲ್ಯಾಣ ಪ್ರಸಂಗ ಪುಸ್ತಕದಲ್ಲಿ ಮುಂಡಾಜೆ ಅವರ ಸ್ತ್ರೀ ವೇಷದ ಚಿತ್ರ ಮುಖಪುಟದಲ್ಲಿದ್ದು ಅವರ ವೇಷದ ಸರಣಿಯ ದಾಖಲಾತಿ ಒದಗಿಸುತ್ತದೆ.
ಪುಂಡು, ರಾಜವೇಶ, ನಾಟಕೀಯ ವೇಷಗಳಲ್ಲಿ ನುರಿತ ಕಲಾವಿದರಾಗಿದ್ದರು. ಅವರ ಅಂತ್ಯ ಸಂಸ್ಕಾರ ಜೂ.8 ರಂದು ಮಧ್ಯಾಹ್ನ 1 ಗಂಟೆಗೆ ಕದ್ರಿ ಮಲ್ಲಿಕಟ್ಟೆ ಮೈದಾನದಲ್ಲಿ ಅಂತ್ಯದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಿದ್ದು, ಮಧ್ಯಾಹ್ನ 1.15 ಕ್ಕೆ ಕದ್ರಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಜರಗಲಿದೆ ಎಂದು ತಿಳಿದು ಬಂದಿದೆ.
ಹೃದಯ ಸಂಬಂಧಿ ಅನಾರೋಗ್ಯ ನಿಮಿತ್ತ ಕೆಲ ದಿನಗಳ ಹಿಂದಷ್ಟೇ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನಡೆದು ಚೇತರಿಸಿ ಮನೆಗೆ ಮರಳಿದ್ದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.