
ಹೃದಯಕ್ಕೆ ನಾಟಿದ ಎರಡು ಪುಸ್ತಕಗಳು: ಸತ್ಯೊಲು ಮತ್ತು ಸಮಾಜವಾದದ ಚರಿತ್ರೆ.....
ಇತ್ತೀಚಿನ ಒಂದೆರಡು ದಿನಗಳಲ್ಲಿ ಓದಿ ಮುಗಿಸಿದ ಎರಡು ಪುಸ್ತಕಗಳಂತೂ ಅತ್ಯಂತ ಪ್ರಭಾವಶಾಲಿಯಾಗಿದೆ. ಅದರಲ್ಲಿ ಒಂದು ನಾಡಿನ ಸಾಕ್ಷಿಪ್ರಜ್ಞೆ, ಯುವ ಪತ್ರಕರ್ತರಾದ ನವೀನ್ ಸೂರಿಂಜೆಯವರು ಬರೆದಿರುವ ಸತ್ಯೊಲು ಹಾಗೂ ಪ್ರಗತಿಪರ ಚಿಂತಕರಾದ ಡಾ. ಕೃಷ್ಣಪ್ಪ ಕೊಂಚಾಡಿಯವರು ಬರೆದಿರುವ ಸಮಾಜವಾದಿ ಚರಿತ್ರೆ.
ತುಳುನಾಡಿನಲ್ಲಿ ಜನತೆ ಆರಾಧಿಸುತ್ತಾ ಬಂದಿರುವ ಬೂತಾರಾಧನೆ/ದೈವಾರಾಧನೆಯ ಬಗ್ಗೆ ಬೆಳಕು ಚೆಲ್ಲಿರುವ ಈ ಕಿರುಹೊತ್ತಿಗೆ ಅದೆಷ್ಟೋ ದೈವಗಳ ಬಗ್ಗೆ ನಿಜಾಂಶಗಳನ್ನು ವಿವರಿಸುತ್ತಾ, ಅಂದಿನ ಕಾಲದ ತಳ ಜನಸಮುದಾಯಗಳ ನಾಯಕರೆನೆಸಿಕೊಂಡವರನ್ನು ಪುರೋಹಿತಶಾಹಿ ವರ್ಗ ಮಾಯ(ಕೊಲೆ) ಆಗುವಲ್ಲಿ ವಹಿಸಿದ ಪಾತ್ರವನ್ನು ಎಳೆಎಳೆಯಾಗಿ ಬಿಡಿಸಿಟ್ಟ ನವೀನ್ ಅವರ ವರ್ಣನೆ ನಿಜಕ್ಕೂ ಅತ್ಯದ್ಭುತ. ಇಂದಿನ ತುಳುನಾಡಿನ ಜನತೆಗೆ ಬೆರಳೆಣಿಕೆಯಷ್ಟು ದೈವ/ಭೂತಗಳ ಪರಿಚಯವಿದ್ದರೆ, ನವೀನ್ ಅವರಂತೂ ಈ ಪುಸ್ತಕದಲ್ಲಿ ಅದೆಷ್ಟೋ ದೈವಗಳ ಬಗ್ಗೆ ಸವಿವರವಾಗಿ ಹೇಳಿದ್ದಾರೆ ಮಾತ್ರವಲ್ಲ ಶ್ರಮಿಕರ ಜನಪದದ ಸೊಬಗನ್ನೂ ಹಾಗೂ ಜಾತಿ ಧರ್ಮದ ಎಲ್ಲೆ ಮೀರಿ ಸೌಹಾರ್ದತೆಯನ್ನು ಸಾರುವ ಚಿತ್ರಣವನ್ನು ಹೃದಯಕ್ಕೆ ನಾಟುವಂತೆ ವರ್ಣಿಸಿದ್ದಾರೆ. ಇದು ಇಂದಿನ ಕಾಲಮಾನಕ್ಕೆ ತುರ್ತು ಅಗತ್ಯ ಔಷಧಿಯಾಗಿ ಮೂಡಿ ಬಂದಿದೆ ಈ ಪುಸ್ತಿಕೆ...
ಬಂಡವಾಳಶಾಹಿ ವ್ಯವಸ್ಥೆಗೆ ಎದುರಾಗಿ ಯಾವುದೂ ಇಲ್ಲ ಎನ್ನುವಂತಹ ದುರಂಹಕಾರದ ಮಾತುಗಳು ಅಂದಿನ ಕಾಲದಲ್ಲಿ ಅದರ ಪ್ರತಿಪಾದಕರಿಂದ ಎದುರಾದಾಗ ಅದೇ ಬಂಡವಾಳಶಾಹಿಯ ಗರ್ಭದಿಂದಲೇ ಮೂಡಿಬಂದ ಚಿಂತನೆಯೇ ಸಮಾಜವಾದ. ಇದು ಕೂಡ ಒಮ್ಮಿದೊಮ್ಮಿಲೇ ಹೊರಹೊಮ್ಮಿದ್ದಲ್ಲ...16ನೇ ಶತಮಾನದಲ್ಲಿ ಯುರೋಪಿನಲ್ಲಿ ಬೆಳೆದು ಬಂದ ಕೈಗಾರಿಕಾ ಕ್ರಾಂತಿಯ ಮೂಸೆಯಲ್ಲಿಯೇ ಅರಳಿತ್ತು ಸಮಾಜವಾದಿ ಚಿಂತನೆ. ಆಗ ಮಾಲಕ ವರ್ಗ ಅತ್ಯಂತ ಅಮಾನವೀಯವಾಗಿ ಶೋಷಿಸುತ್ತಾ ತನ್ನ ಹಿತಾಸಕ್ತಿಗಾಗಿ ಕಾರ್ಮಿಕ ವರ್ಗವನ್ನು ನಿರ್ದಯವಾಗಿ ಕಾಣುತ್ತಿತ್ತು.ಆವಾಗ ಅಸ್ಪಷ್ಟವಾಗಿ ಆಗ ತಾನೆ ಮೂಡಿ ಬಂದ ಸಮಾಜವಾದಿ ಪರಿಕಲ್ಪನೆಗೆ ಸೆನ್ ಸಿಮೋನ್, ಷಾರ್ಲ್ ಪೂರ್ಯೇ, ರಾಬರ್ಟ್ ಓವೆನ್ ಮೊದಲಾದವರು ಶಕ್ತಿ ತುಂಬಿದರು. ಇದು ಬೆಳೆಯುತ್ತಾ ಬೆಳೆಯುತ್ತಾ ಬಳಿಕ ವೈಜ್ಞಾನಿಕ ತಳಹದಿಯಲ್ಲಿ ಸ್ಪಷ್ಟ ರೂಪವನ್ನು ನಿರೂಪಿಸಿದವರು.
ಕಾರ್ಲ್ ಮಾರ್ಕ್ಸ್ ಹಾಗೂ ಫೆಡರಿಕ್ ಎಂಗೆಲ್ಸ್. ಇಂತಹ ವೈಜ್ಞಾನಿಕ ಸಮಾಜವಾದ ಜಾಗತಿಕ ನೆಲೆಯಲ್ಲಿ ಪ್ರಸಿದ್ದಿ ಪಡೆದು ಇದೇ ಸಿದ್ದಾಂತದ ಅಡಿಯಲ್ಲಿ ಪ್ರಥಮ ಬಾರಿಗೆ ರಷ್ಯಾದಲ್ಲಿ ಕ್ರಾಂತಿ ನಡೆಯಿತು. ಇಂದಿಗೂ ಜಗತ್ತಿನ 5 ದೇಶಗಳು ಸಮಾಜವಾದಿ ವ್ಯವಸ್ಥೆ ಅಡಿಯಲ್ಲಿ ಜನತೆಯ ಬದುಕನ್ನು ಪೋಷಿಸುತ್ತಿವೆ. ನಮ್ಮ ದೇಶದೊಳಗೆ ಸಮಾಜವಾದ ಹೆಸರಿನಲ್ಲಿ ಅದೆಷ್ಟೋ ಜನರು ರಾಜಕಾರಣವನ್ನು ನಡೆಸಿ ಬಳಿಕ ತಮ್ಮ ಸ್ವಾರ್ಥಕ್ಕಾಗಿ ಅದೇ ಸಮಾಜವಾದವನ್ನು ಲೇವಡಿ ಮಾಡಿರುವ ಅಂಶಗಳೂ ಈ ಪುಸ್ತಕದಲ್ಲಿವೆ.
ನವೀನ್ ಸೂರಿಂಜೆಯವರ ಪುಸ್ತಕ ತುಳುನಾಡಿನ ಸೌಹಾರ್ದ ಪರಂಪರೆಗೆ ಒತ್ತು ನೀಡಿದರೆ, ಡಾ. ಕೃಷ್ಣಪ್ಪ ಕೊಂಚಾಡಿಯವರ ಪುಸ್ತಕ ದೇಶದ ಸಂವಿಧಾನದಲ್ಲಿ ಅಡಕವಾಗಿರುವ ಸಮಾಜವಾದದ ಪರಿಕಲ್ಪನೆಗೆ ಅತ್ಯದ್ಭುತ ಶಕ್ತಿಯನ್ನು ತುಂಬುತ್ತದೆ ಹಾಗೂ ಸಮಾಜವಾದವೊಂದೇ ಜಗತ್ತಿನ ಮನುಕುಲದ ಕಷ್ಟಕಾರ್ಪಣ್ಯಗಳಿಗೆ ದಿವ್ಯ ಔಷಧ ಎಂಬುದನ್ನು ಸಾಬೀತು ಪಡಿಸುತ್ತದೆ.
ಆದ್ದರಿಂದ ತಾವುಗಳು ಕೂಡ ಇವೆರಡೂ ಪುಸ್ತಕಗಳನ್ನು ಖರೀದಿಸಿ ಸತ್ಯೊಲುಗಳ ಸತ್ಯ ತಿಳಿಯಿರಿ..... ಸಮಾಜವಾದದ ಚರಿತ್ರೆಯನ್ನು ಅರಿಯಿರಿ. ಎನ್ನುತ್ತಾರೆ ಪ್ರಗತಿಪರ ಚಿಂತಕರು ಸುನಿಲ್ ಕುಮಾರ್ ಬಜಾಲ್.