
ಮಂಗಳೂರಿನ ಎಸ್‌ಡಿಎಂ ಪಿಜಿ ಸೆಂಟರ್‌ನಲ್ಲಿ ಯೋಗ ದಿನಾಚರಣೆಯ ಕರ್ಟೈನ್‌ರೈಸರ್
Monday, June 9, 2025
ಮಂಗಳೂರು: ಎಸ್‌ಡಿಎಂ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಪೋಸ್ಟ್ ಗ್ರ್ಯಾಜುಯೇಟ್ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್, ಮಂಗಳೂರು ಇದರ ರಾಷ್ಟ್ರೀಯ ಏಕೀಕರಣ ವೇದಿಕೆಯು ಆಯುಷ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ದೇಲಂಪಾಡಿ ಯೋಗ ಪ್ರತಿಷ್ಠಾನದ ಸಹಯೋಗದೊಂದಿಗೆ ಜೂ.9 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕರ್ಟೈನ್‌ರೈಸರ್ ಅನಾವರಣಗೊಳಿಸುವ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಯೋಗ ಗುರು ಯೋಗ ರತ್ನ ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಅವರ ವಿದ್ಯಾರ್ಥಿಗಳು ಪ್ರೋಟೋಕಾಲ್ ಚಾರ್ಟ್‌ನಲ್ಲಿರುವ ಎಲ್ಲಾ ಯೋಗಾಸನಗಳನ್ನು ಪ್ರದರ್ಶಿಸಿದರು ಮತ್ತು ಅಂತರರಾಷ್ಟ್ರೀಯ ಯೋಗ ದಿನದಂದು ಯೋಗ ಪ್ರದರ್ಶನಕ್ಕಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ನಿಯಮಿತವಾಗಿ ಯೋಗ ಮಾಡುವುದರ ಔಚಿತ್ಯವನ್ನೂ ವಿವರಿಸಿದರು.
ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಾದ ನೀನಾ ಪೈ, ಸುಶೀಲಾ ಕುಮಾರಿ ವಿ., ಸುಮಾ ಶೆಟ್ಟಿ, ಭಾರತಿ ಎಸ್. ರಾವ್, ರೋಶ್ನಿ ಶೆಣೈ ಮತ್ತು ಹರಿಣಿ ಈ ಯೋಗ ಕಾರ್ಯಕ್ರಮಕ್ಕೆ ಸಹಕರಿಸಿದರು. ಸಂಸ್ಥೆಯ ನಿರ್ದೇಶಕಿ ಡಾ. ಸೀಮಾ ಎಸ್. ಶೆಣೈ, ರಾಷ್ಟ್ರೀಯ ಏಕೀಕರಣ ವೇದಿಕೆ ಸಂಯೋಜಕಿ ಡಾ. ಹರ್ಷಿತಾ ಹಾಗೂ ಎಲ್ಲಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಥಮ ಎಂಬಿಎ ವಿದ್ಯಾರ್ಥಿನಿ ಗೌತಮಿ ಕಾರ್ಯಕ್ರಮ ನಿರೂಪಿಸಿದರು.