
ನಿವೇಶನಕ್ಕೆ ಆಗ್ರಹಿಸಿ ಒಂದಾದ ಹಿಂದೂ-ಮುಸ್ಲಿಂ ಮಹಿಳೆಯರು
Monday, June 9, 2025
ಮಂಗಳೂರು: ತುಳುನಾಡಿನ ಯುವಕರು ಹಿಂದೂ-ಮುಸ್ಲಿಂ ಎಂದು ಬಿಸಿ ಬಿಸಿ ವಾಗ್ವಾದದಲ್ಲಿ ತೊಡಗಿದ್ದರೆ, ಕುಪ್ಪೆಪದವು ಗ್ರಾಮ ಪಂಚಾಯತ್ ಮುಂಭಾಗ ಮಂಜೂರಾದ ಮನೆ ನಿವೇಶನ ವಿತರಿಸುವಂತೆ ಒತ್ತಾಯಿಸಿ ಕಳೆದ 11 ದಿನಗಳಿಂದ ಧರಣಿ ನಿರತರಾದ ಶ್ರಮಿಕ ಹೆಣ್ಣುಮಕ್ಕಳು ಈ ‘ಧರ್ಮ ಯುದ್ಧ’, ಹಿಂದೂ-ಮುಸ್ಲಿಂ ಗೊಡವೆ ಇಲ್ಲದೆ ಒಟ್ಟಾಗಿ ಹೋರಾಟ ನಡೆಸುತ್ತಿದ್ದಾರೆ.
‘ನಮ್ಮದು ಶ್ರಮಿಕರ ಧರ್ಮ, ಬಡವರ ಧರ್ಮ’ ಎಂಬ ಸಂದೇಶ ಹೊರಡಿಸುವಂತೆ ಧರಣಿ ಮಂಟಪದಲ್ಲೆ ಒಟ್ಟಾಗಿ ಹಿಂದೂ, ಮುಸ್ಲಿಂ ಹೆಣ್ಣುಮಕ್ಕಳು ತಮ್ಮ ಅನ್ನದ ಬಟ್ಟಲಾಗಿರುವ ಬೀಡಿ ಸುತ್ತುತ್ತಿದ್ದಾರೆ. ಒಂದೇ ಮಡಕೆಯಲ್ಲಿ ಗಂಜಿ ಬೇಯಿಸಿ ತಿನ್ನುತ್ತಿದ್ದಾರೆ. ಇದು ನಿಜಕ್ಕೂ ಸುಂದರ ದೃಶ್ಯ, ಕರಾವಳಿಯ ಜನತೆಗೆ ಬದುಕಿನ ಪಾಠವನ್ನು ಹೇಳುವ ದೃಶ್ಯ ಇದಾಗಿದೆ.
ಸ್ಥಳೀಯ ಶಾಸಕ ಭರತ್ ಶೆಟ್ಟಿ ಮಾತ್ರ ಇತ್ತ ತಿರುಗಿ ನೋಡದೆ ‘ಧರ್ಮ’ ರಕ್ಷಣೆಗಾಗಿ ಕತ್ತಿ ಹಿಡಿದಿರುವ ಯುವಕರ ಪರವಾಗಿ ‘ಹೋರಾಟ’ದಲ್ಲಿ ಬ್ಯುಸಿ ಆಗಿದ್ದಾರೆ ಎನ್ನುತ್ತಾರೆ ಹೋರಾಟಗಾರರು.