
ಮಲೆಕುಡಿಯ ಸಂಘದ 13ನೇ ವರ್ಷದ ವಾರ್ಷಿಕ ಸಮ್ಮೇಳನ
ಕಾರ್ಕಳ: ಜಿಲ್ಲಾ ಮಲೆಕುಡಿಯ ಸಂಘ (ರಿ.), ಉಡುಪಿ ಇದರ 13ನೇ ವರ್ಷದ ವಾರ್ಷಿಕ ಸಮ್ಮೇಳನವು ಸಂಘದ ಕೇಂದ್ರ ಕಛೇರಿ ಕಾರ್ಕಳ ಮಾಳ ಪೇರಡ್ಕದಲ್ಲಿರುವ ಮಲೆಕುಡಿಯ ಸಮುದಾಯ ಭವನದಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರಿನ ಸಹಾಯಕ ನಿರ್ದೇಶಕ ಹೆಚ್. ಶ್ರೀನಿವಾಸ್ ಭಾಗವಹಿಸಿ ಮಾತನಾಡಿ, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳು ಇದ್ದು, ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ ಇದರ ಯೋಜನಾ ಸಮನ್ವಯಾಧಿಕಾರಿಯಾದ ನಾರಾಯಣ ಸ್ವಾಮಿ ಮಾತನಾಡಿ, ಮಲೆಕುಡಿಯ ಸಮುದಾಯದ 50 ವರ್ಷಗಳ ಬೇಡಿಕೆಯಾದ ಕಬ್ಬಿನಾಲೆ ಮತ್ತಾವು ಸೇತುವೆಗೆ ಸರ್ಕಾರದಿಂದ 2 ಕೋಟಿ ರೂ. ಅನುದಾನ ಮಂಜೂರು ಆಗಿದೆಯೆಂದರು. ಮಲೆಕುಡಿಯ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುವುದಾಗಿ ತಿಳಿಸಿದರು.
ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ್ ಗೌಡ ಈದು ಮಾತನಾಡಿ, ಸಂಘದ ಪ್ರಾರಂಭ ದಿನದಿಂದಲೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಕೂಡ ಇದೇ ರೀತಿಯಲ್ಲಿ ಸಮುದಾಯದ ಬೆಂಬಲ ಕೋರಿದರು.
ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ ಇದರ ವ್ಯವಸ್ಥಾಪಕ ವಿಶ್ವನಾಥ್ ಮಾತನಾಡಿ, ಮಲೆಕುಡಿಯ ಜನಾಂಗದವರು ಸಂಘಟಿತರಾಗಿ ಸರ್ಕಾರದ ಸೌಲಭ್ಯ ಪಡೆಯುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಅಧ್ಯಕ್ಷತೆ ವಹಿಸಿದ್ದರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, 2024-25ನೇ ಸಾಲಿನ ವಾರ್ಷಿಕ ಮಹಾಸಭೆ, 2025ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಟಾಪರ್ಸ್ ಸ್ವಾತಿ ಹೆರ್ಮುಂಡೆ ಹಾಗೂ ದ್ವಿತೀಯ ಪಿ.ಯು.ಸಿ ಟಾಪರ್‌ಗಳಾದ ವಿಜ್ಞಾನ ವಿಭಾಗ ಧೀರಜ್ ನೂರಾಳ್ ಬೆಟ್ಟು, ಕಲಾ ವಿಭಾಗ ಪ್ರಜ್ಣಾ ಕೆರ್ವಾಶೆ, ವಾಣಿಜ್ಯ ವಿಭಾಗ ವಿದ್ಯಾ ಕೆರ್ವಾಶೆ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು.
ಆಯ್ದಾ ಪ್ರತಿಭಾವಂತ 13 ವಿದ್ಯಾರ್ಥಿಗಳಿಗೆ ಮಾಸಿಕ ಪ್ರೋತ್ಸಾಹಧನ ವಿತರಣೆ, 3 ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಿಸಲಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ನೋಣಯ್ಯ ಗೌಡ ರೆಂಜಾಳ, ಜಿಲ್ಲಾ ಸಂಘದ ಉಪಾಧ್ಯಕ್ಷೆ ಶೋಭಾ ನೂರಾಳ್ ಬೆಟ್ಟು, ಸಂಘದ ವಕ್ತಾರ ದಿನೇಶ್ ಗೌಡ ನೂರಾಳ್ ಬೆಟ್ಟು, ಸಹ ವಕ್ತಾರೆ ಸುಜಾತ ಕಬ್ಬಿನಾಲೆ, ಕ್ರೀಡಾ ಸಮಿತಿ ಅಧ್ಯಕ್ಷರಾದ ಕರ್ಣ ನೂರಾಳ್ ಬೆಟ್ಟು ಉಪಸ್ಥಿತರಿದ್ದರು.
ಕೋಶಾಧಿಕಾರಿ ಸುಂದರಿ ಪೇರಡ್ಕ ಸ್ವಾಗತಿಸಿ, ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ ಕೆರ್ವಾಶೆ ವಾರ್ಷಿಕ ಆಡಳಿತ ವರದಿ ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಮಲ್ಲಿಕಾ ಮಾಳ ವಂದಿಸಿದರು.