
ನಮ್ಮ ಸಾಂಪ್ರದಾಯಿಕ ಹಾಡುಗಳು ನಮ್ಮ ಪರಂಪರೆಯ ಕುರಿತು ತಿಳಿಸುತ್ತವೆ: ಸ್ಟ್ಯಾನಿ ಆಲ್ವಾರಿಸ್
ಮಂಗಳೂರು: ಯಾವುದೇ ಜನ ಸಮುದಾಯದ ಐತಿಹಾಸಿಕ, ಸಾಮಾಜಿಕ ಹಿನ್ನಲೆಯನ್ನು ತಿಳಿಯಲು ಆ ಜನರ ಪಾರಂಪರಿಕ ಸಾಂಪ್ರದಾಯಿಕ ಹಾಡುಗಳ ಪರಿಚಯ ತುಂಬಾ ಅಗತ್ಯ. ಅದುದರಿಂದ ಯುವ ಪೀಳಿಗೆ ತಮ್ಮ ಸಮುದಾಯದ ಜನಪದ ಸಾಹಿತ್ಯದತ್ತ ಒಲವು ಬೆಳಸಿಕೊಳ್ಳುವುದಕ್ಕೆ ಆಸಕ್ತಿ ತೋರಿಸಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಹೇಳಿದರು.
ಅವರು ಜೂ.29 ರಂದು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಸಭಾಗಂಣದಲ್ಲಿ ಕೊಂಕಣಿ ಸಾಹಿತ್ಯ್ ಕಲಾ ಆನಿ ಸಾಂಸ್ಕೃತಿಕ ಸಂಘಟನ್, ಉಡುಪಿ ಜಿಲ್ಲೆ, ಮತ್ತು ಕಥೊಲಿಕ ಸಭಾ, ಮಿಲಾಗ್ರಿಸ್ ಘಟಕ, ಕಲ್ಯಾಣಪುರ ಇವರ ಜಂಟಿ ಸಹಯೋಗದಲ್ಲಿ ಜರಗಿದ ‘ವೊವಿಯೋ ವೇರ್ಸ್’ ಕಾರ್ಯಾಗಾರವನ್ನು ಗುಮಟ್ ವಾದನವನ್ನು ಭಾರಿಸುವುದರ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಭಾಷೆ, ಶಿಕ್ಷಣ, ಸಾಹಿತ್ಯ, ಕಲೆ, ಜಾನಪದ ಮತ್ತು ಪರಂಪರೆ ಉಳಿಸುವಿಕೆ ಹಾಗೂ ಬೆಳಸುವಿಕೆಗೆ ನಿರಂತರ ಪ್ರೋತ್ಸಾಹಿಸುತ್ತ ಬರುತ್ತಿದೆ. ಕೊಂಕಣಿ ಭಾಂದವರು ಅಕಾಡೆಮಿಯು ನಡೆಸುವ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಇದರ ಸದುಪಯೋಗವನ್ನು ಪಡೆಯಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವಾ ಅವರು ಡಾ. ಪ್ಲಾವಿಯಾ ಕ್ಯಾಸ್ತೆಲಿನೊ ಮಣಿಪಾಲ ಇವರು ಬರೆದಿರುವ ‘ತುಜ್ಯಾ ಹಾಸ್ಯಾಂ ಖಾತಿರ್’ ಕವಿತ ಸಂಗ್ರಹದ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ, ‘ಜಾಗತೀಕರಣದ ಅತಿಯಾದ ಒತ್ತಡಗಳ ಫಲವಾಗಿ ಇಂದಿನ ಯುವಜನತೆಗೆ ತಮ್ಮ ಪರಂಪರೆಯ ಹಾಗೂ ಜನಪದ ಸಂಸ್ಕೃತಿಯ ಕುರಿತು ಅಭಿಮಾನ ಬೆಳೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಹಲವಾರು ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ. ಈ ಹಿನ್ನಲೆಯಲ್ಲಿ ತಂದೆ, ತಾಯಿ, ಪೋಷಕರು ತಮ್ಮ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡುವುದರೊಂದಿಗೆ ತಮ್ಮ ತಮ್ಮ ಕುಟುಂಬದ ಪರಂಪರೆಯನ್ನು ನೆನಪು ಮಾಡುತ್ತಾ ಇರಬೇಕಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಪ್ರಮೋದ್ ಕಾರ್ಡೋಜ ಮಾತನಾಡಿ, ಪಾಶ್ಚಾತ್ಯೀಕರಣದ ಫಲವಾಗಿ ನಮ್ಮ ಜನರ ನಡುವೆ ಜನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಲವಾರು ಆನಾಹುತಕಾರಿ ಬದಲಾವಣೆಗಳಾಗಿವೆ. ಇವುಗಳ ಬಗ್ಗೆ ತಮ್ಮ ಮನೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವವರು ಹೆಚ್ಚಿನ ಗಮನ ನೀಡಿ ಹಿರಿಯರು, ಕಿರಿಯರನ್ನು ಸರಿದಾರಿಗೆ ತರುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಹ ಸಂಘಟಕ, ಕಥೊಲಿಕ್ ಸಭಾ ಕಲ್ಯಾಣಪುರದ ಅಧ್ಯಕ್ಷೆ ಮಾರ್ಸೆಲಿನ್ ಶೆರಾ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಾಹಿತ್ಯ್, ಕಲೆ ಮತ್ತು ಸಾಂಸ್ಕೃತಿಕ ಸಂಘಟನೆಯ ಆಧ್ಯಕ್ಷ ಡಾ. ಪ್ಲಾವಿಯಾ ಕಾಸ್ತೆಲಿನೊ ವಂದಿಸಿದರು. ರಿತೇಶ್ ಡಿಸೋಜ ಉದ್ಯಾವರ ಕಾರ್ಯಕ್ರಮ ನಿರೂಪಿಸಿರು.
ಸಭಾ ಕಾರ್ಯಕ್ರಮದ ನಂತರ ಐರಿನ್ ರೆಬೆಲ್ಲೊ, ಅನಿಲ್ ಡಿಕುನ್ಹಾ, ಮತ್ತು ಗ್ಲೆನನ್ ಡಿಸೋಜ ಇವರ ನೇತೃತ್ವದಲ್ಲಿ ವೊವಿಯೋ ವೇರ್ಸ್ ಕಾರ್ಯಾಗಾರ ನಡೆಯಿತು. ಇದರಲ್ಲಿ ಕೊಂಕಣಿ ಸಾಂಪ್ರದಾಯಿಕ ಹಾಡುಗಳ ತರಬೇತಿಯನ್ನು ನೀಡಲಾಯಿತು.